×
Ad

ಪ್ರಜಾಪ್ರಭುತ್ವದ ಅಳಿವು-ಉಳಿವು ಸದ್ಯದ ಸವಾಲು

Update: 2025-11-17 11:06 IST

ಒಂದೆಡೆ ಮಹಾತ್ಮ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಅವರ ಬಗ್ಗೆ ಇಂಥ ಸುಳ್ಳುಗಳನ್ನು ಸೃಷ್ಟಿಸುತ್ತಲೇ ಇನ್ನೊಂದೆಡೆ ಗಾಂಧೀಜಿ, ಅಂಬೇಡ್ಕರ್ ಶಾಖೆಗೆ ಭೇಟಿ ನೀಡಿದ್ದರು ಎಂದು ಪುರಾವೆಗಳಿಲ್ಲದೇ ಕಟ್ಟುಕಥೆಗಳನ್ನು ಹರಿಬಿಡಲಾಗುತ್ತದೆ. ಅಂಬೇಡ್ಕರ್ ಅವರ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ ಒಳಗಿಂದೊಳಗೆ ಮೀಸಲಾತಿಯ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ.

ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ನಾನಾ ವಿಧದ, ದೃಷ್ಟಿ ಕೋನಗಳ ವಿಶ್ಲೇಷಣೆಗಳು ಬರುತ್ತಿವೆ. ಚುನಾವಣೆಯಲ್ಲಿ ಯಾರು ಗೆಲ್ಲಲಿ, ಸೋಲಲಿ ಅದು ಮುಖ್ಯವಲ್ಲ. ಅದು ಚರ್ಚೆಯಾಗಬೇಕಾದ ಸಂದರ್ಭ ಈಗಿನದಲ್ಲ. ಅದರ ಬದಲಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೆಷ್ಟು ದಿನ ಉಳಿಯುತ್ತದೆ ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ಸನ್ನಿವೇಶವಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಬೇಕಾದ ಆಯೋಗವೇ ಸಂಘ ಪರಿವಾರದ ಒಂದು ಅಂಗವಾಗಿ ಆ ಪ್ರಕ್ರಿಯೆಯನ್ನೇ ಹಾಳು ಮಾಡಲು ಹೊರಟಿರುವುದು ಆತಂಕವನ್ನುಂಟು ಮಾಡಿದೆ.

ಚುನಾವಣಾ ಆಯೋಗ ಮತ್ತು ಆರೆಸ್ಸೆಸ್ ಜಂಟಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿವೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ತಳ್ಳಿ ಹಾಕಲು ಆಗುವುದಿಲ್ಲ.

‘ಪ್ರಜಾಪ್ರಭುತ್ವ’ ಮತ್ತು ಸಮಾಜವಾದ ಎಂಬ ಪದಗಳು ಭಾರತಕ್ಕೆ ಹೊರಗಿನಿಂದ ಬಂದ ಪದಗಳು ಎಂದು ಗೋಳ್ವಾಲ್ಕರ್ ಏಳು ದಶಕಗಳ ಹಿಂದೆಯೇ ಹೇಳಿದ್ದರು. ಆದರೆ ಮೋಹನ್ ಭಾಗವತ್‌ರನ್ನು ಕೇಳಿದರೆ ಇದೆಲ್ಲ ಸುಳ್ಳು, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿ ಜಾರಿ ಕೊಳ್ಳುತ್ತಾರೆ.

ಈಗ ಶತಮಾನೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರೆಸ್ಸೆಸ್) ತನ್ನ ಪರಿಕಲ್ಪನೆಯ ಹಿಂದೂ ರಾಷ್ಟ್ರದ ಗುರಿ ಸಮೀಪಿಸುತ್ತಿದೆ ಎಂದು ಸಂತಸದಲ್ಲಿದೆ. ಯಾವುದೇ ಸಂಘಟನೆಗಾದರೂ ಇದು ಹೆಮ್ಮೆ ಪಡುವ ವಿದ್ಯಮಾನ. ಅದಕ್ಕಾಗಿ ದೇಶವ್ಯಾಪಿ ಸಭೆ, ಪಥ ಸಂಚಲನಗಳನ್ನು ನಡೆಸಲಾಗುತ್ತಿದೆ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಅದು ತನ್ನ ಇತಿಹಾಸದ, ಸಾಧನೆಗಳ ಪಟ್ಟಿ ಮಾಡಿ ಹೇಳಿದರೆ ಹೇಳಲಿ. ಆದರೆ ಮಾಡಿಲ್ಲದ ಕೆಲಸವನ್ನು ಮಾಡಿದ್ದೇನೆಂದು ಹೇಳುವುದು ಎಷ್ಟು ಸರಿ? ಅದು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ ಎಂಬುದು ಹೊಸ ಆರೋಪವಲ್ಲ.ಗಾಂಧಿ ಹತ್ಯೆಯ ಪ್ರಕರಣದ ಆರೋಪವೂ ಹಳೆಯದು. ಆದರೆ ಗಾಂಧೀಜಿ ಮತ್ತು ಅಂಬೇಡ್ಕರ್ ಶಾಖೆಗೆ ಬಂದಿದ್ದರೆಂದು ಯಾವುದೇ ಪುರಾವೆಗಳಿಲ್ಲದೇ ಹೇಳುವುದು ಸಹಜವಾಗಿ ಇತರರ ಆಕ್ಷೇಪಕ್ಕೆ ಕಾರಣವಾಗುತ್ತದೆ. ಅದೇ ರೀತಿ ನೋಂದಣಿಯಾಗದ ಸಂಘದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರಾದ ಹರಿಪ್ರಸಾದ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಯವರು ಮಾಡಿರುವ ಆರೋಪಗಳು ಅಸಹಜವೇನಲ್ಲ. ಈ ಕುರಿತಂತೆ ಸ್ಪಷ್ಟೀಕರಣ ನೀಡಲು ಮೋಹನ್ ಭಾಗವತ್‌ರು ಬೆಂಗಳೂರಿಗೆ ಬರಬೇಕಾಯಿತು.

ಕಳೆದ ಮೂವತ್ತೆರಡು ವರ್ಷಗಳ ಕಾಲಾವಧಿಯಲ್ಲಿ ಅದರಲ್ಲೂ ಅಯೋಧ್ಯೆಯ ಬಾಬರಿ ಮಸೀದಿಯನ್ನು ಬೀಳಿಸಿದ ನಂತರ ಆರೆಸ್ಸೆಸ್ ದೇಶದ ದಿಕ್ಕನ್ನೇ ಬದಲಿಸಿತು. ಅದು ಒಂದೊಂದಾಗಿ ತನ್ನ ಕಾರ್ಯಸೂಚಿಯ ಭಾಗವಾದ ವಿಷಯಗಳನ್ನು ಪ್ರಕಟಿಸುತ್ತ ಹೋದಂತೆ, ನಾವು ಅದರ ಸುತ್ತ ಚರ್ಚೆ ಮಾಡುತ್ತ ಹೋದೆವು.ಆದರೆ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅದಕ್ಕೆ ತಿರುಗುಬಾಣವಾಗಿದೆ. ಸಂಘ ಪರಿವಾರವನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್‌ನೋಂದಣಿಯಾಗದ ಸಂಸ್ಥೆ ಎಂದು ಆರೋಪಿಸಿದರು. ಇದಷ್ಟೇ ಅಲ್ಲದೆ ಅದು ಸಂಗ್ರಹಿಸುವ ಹಣದ ಲೆಕ್ಕಾಚಾರದ ಪ್ರಶ್ನೆಯನ್ನು ಎತ್ತಿದರು. ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರೆಸ್ಸೆಸ್‌ಪಥಸಂಚಲನ ವಿವಾದಕ್ಕೆ ಕಾರಣವಾಯಿತು. ಇದಕ್ಕೆಲ್ಲ ಉತ್ತರಿಸಲು ಬೆಂಗಳೂರಿಗೆ ಬಂದ ಆರೆಸ್ಸೆಸ್ ಸಂಘಚಾಲಕ ಮೋಹನ್ ಭಾಗವತ್ ಅವರು ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೆ ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂದು ಜಾರಿಕೆಯ ಉತ್ತರ ನೀಡಿದರು.

ಇದೇ ಸಂದರ್ಭದಲ್ಲಿ ನಾಡಿನ ಸಾಕ್ಷಿ ಪ್ರಜ್ಞೆ ಎಂದು ಹೆಸರಾದ ಹಿರಿಯ ಲೇಖಕ ದೇವನೂರು ಮಹಾದೇವ ಅವರು ಆರೆಸ್ಸೆಸ್ ಸೃಷ್ಟಿಸುತ್ತಿರುವ ಸುಳ್ಳುಗಳ ಬಗ್ಗೆ ಪ್ರಶ್ನೆಯನ್ನೆತ್ತಿದರು. ಅದಕ್ಕೆ ಉತ್ತರ ನೀಡಲು ಹೋದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರು ಇನ್ನಷ್ಟು ಸುಳ್ಳುಗಳನ್ನು ಹೇಳಿದರು.

ಆರೆಸ್ಸೆಸ್ ಮಾಡುತ್ತ ಬಂದ ಕಸರತ್ತುಗಳು ಯಾರಿಗೂ ಸುಲಭಕ್ಕೆ ಅರ್ಥವಾಗುವುದಿಲ್ಲ. ಒಂದೆಡೆ ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಭಕ್ತಪಡೆಗಳ ಮೂಲಕ ಮಹಾತ್ಮಾ ಗಾಂಧೀಜಿ ಮತ್ತು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತೇಜೋವಧೆಯನ್ನು ಮಾಡಿಸುತ್ತದೆ. ಇನ್ನೊಂದೆಡೆ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂಘದ ಶಾಖೆಗೆ ಭೇಟಿ ನೀಡಿದ್ದರೆಂದು ಹೇಳುತ್ತದೆ. ಇದು ಮಾತ್ರವಲ್ಲ 1963 ರಲ್ಲಿ ಭಾರತ, ಚೀನಾ ಯುದ್ಧದ ಸಮಯದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಆರೆಸ್ಸೆಸ್ ಸ್ವಯಂ ಸೇವಕರಿಗೆ ಆಹ್ವಾನಿಸಿದ್ದರೆಂದು ಇನ್ನೊಂದು ಸುಳ್ಳನ್ನು ಹೇಳಲಾಗುತ್ತದೆ. ಇದರ ಸತ್ಯಾ ಸತ್ಯತೆ ಬಗ್ಗೆ ದೇವನೂರ ಮಹಾದೇವರು ಪ್ರಶ್ನಿಸಿದರೆ ಅದಕ್ಕೂ ಸರಿಯಾದ ಉತ್ತರ ಬರಲಿಲ್ಲ.

ಮೊದಲನೆಯದಾಗಿ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಮಹಾತ್ಮಾ ಗಾಂಧಿಯವರು ನಿಜವಾಗಿಯೂ ಸಂಘದ ಶಾಖೆಗೆ ಬಂದಿದ್ದರೇ? ಬಂದಿದ್ದರೆ ಆವಾಗಿನ ವರ್ತಮಾನ ಪತ್ರಿಕೆಗಳಲ್ಲಿ ಅದು ಪ್ರಕಟವಾಗಿರಬೇಕಾಗಿತ್ತಲ್ಲವೇ? ಸಾಮಾನ್ಯವಾಗಿ ತಮ್ಮ ಡೈರಿಯಲ್ಲಿ ಹಾಗೂ ತಮ್ಮದೇ ಆದ ಪತ್ರಿಕೆಗಳಲ್ಲಿ ಎಲ್ಲವನ್ನೂ ದಾಖಲಿಸುತ್ತಿದ್ದ ಗಾಂಧೀಜಿ ಇದನ್ನೇಕೆ ಬರೆಯಲಿಲ್ಲ? ಇದೇ ರೀತಿ ಅಂಬೇಡ್ಕರ್ ಕೂಡ ಪುಣೆಯ ಸಂಘದ ಶಾಖೆಗೆ ಬಂದಿದ್ದರೆಂದು ಇವರು ಹೇಳುತ್ತಾರೆ. ಅದಕ್ಕೂ ಖಚಿತ ದಾಖಲೆಗಳಿಲ್ಲ. 1939ರ ವೇಳೆಗೆ ಬಹುದೊಡ್ಡ ಜನನಾಯಕರಾಗಿ ಬೆಳೆದಿದ್ದ ಅಂಬೇಡ್ಕರ್ ಸಂಘದ ಶಾಖೆಗೆ ಭೇಟಿ ನೀಡಿದ ಬಗ್ಗೆ ಸಣ್ಣ ಸುದ್ದಿಯಾದರೂ ಬರಬಹುದಿತ್ತಲ್ಲ. ಯಾಕೆ ಬಂದಿಲ್ಲ? ಅಂಬೇಡ್ಕರ್ ಕೂಡ ಡೈರಿಯನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಸಾವಿರಾರು ಪುಟಗಳ ಅವರ ಸಾಹಿತ್ಯದಲ್ಲಿ ಇದು ಯಾಕೆ ದಾಖಲೆಯಾಗಿಲ್ಲ?

ಜರ್ಮನಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಆಪ್ತನಾಗಿ ಗೊಬೆಲ್ಸ್ ಎಂಬ ಪ್ರಚಾರ ಮಂತ್ರಿ ಇದ್ದ. ಆತ ಒಂದು ಸುಳ್ಳನ್ನು ನೂರು ಬಾರಿ ಮಾತ್ರವಲ್ಲ ಸಾವಿರ ಬಾರಿ ಹೇಳಿದರೆ ಜನರು ಅದನ್ನೇ ಸತ್ಯವೆಂದು ನಂಬುತ್ತಾರೆ ಎಂದು ಹೇಳುತ್ತಿದ್ದ.

ಭಾರತದ ಕತೆಯೂ ಅದೇ ಆಗಿದೆ. ದೇಶದ ಸ್ವಾತಂತ್ರ್ಯ ಹೋರಾಟದ ನೇತಾರ ಮಹಾತ್ಮ್ಮಾ ಗಾಂಧಿಯವರ ಬಗ್ಗೆ ಜಾಲತಾಣದಲ್ಲಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ನಿತ್ಯ ತೇಜೋವಧೆಯ ಪ್ರಚಾರ ಮಾಡಿ ಯುವಕರು ಮಾತ್ರವಲ್ಲ, ನಮ್ಮ ಮಕ್ಕಳು ಗಾಂಧಿಯನ್ನು ವಿಲನ್ ಎಂದೂ ಹಾಗೂ ಗೋಡ್ಸೆಯನ್ನು ಹೀರೋ ಎಂದು ಕರೆಯುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ವಿಲಾಸಿ ಎಂದು ಬಿಂಬಿಸಲು ಪೋಟೊ ಶಾಪಿಂಗ್ ಮಾಡಿ ಸುಳ್ಳು ಪ್ರಚಾರ ಮಾಡಿ ಸಾಕಷ್ಟು ತೇಜೋವಧೆ ಮಾಡಲಾಗುತ್ತಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಪೀಳಿಗೆಯ ಹಿರಿಯರು ಬಹುತೇಕ ಈಗ ಬದುಕಿಲ್ಲ. ಕೆಲವರು ಉಳಿದರೂ ಅಷ್ಟೊಂದು ಕ್ರಿಯಾಶೀಲರಾಗಿಲ್ಲ. ಗಾಂಧಿ, ನೆಹರೂ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್ ಬಗ್ಗೆ ಅವರಿಗೆ ಗೊತ್ತಿತ್ತು.ಅವರು ಇಂಥ ಸುಳ್ಳುಗಳನ್ನು ನಂಬುತ್ತಿರಲಿಲ್ಲ. ಅವರ ನಂತರದ ಪೀಳಿಗೆಗೂ ಚೂರು ಪಾರು ಗೊತ್ತಿತ್ತು. ಅವರೂ ನಂಬುತ್ತಿರಲಿಲ್ಲ.ಅವರ ನಂತರ ಬಂದ ಹೊಸ ಪೀಳಿಗೆ ಅಂದರೆ ತೊಂಭತ್ತರ ನಂತರ ಜನಿಸಿದವರು ಇದ್ದಾರಲ್ಲ, ಅವರು ವಾಟ್ಸ್‌ಆ್ಯಪ್ ಯುನಿವರ್ಸಿಟಿ ಯಲ್ಲಿ ಬಿತ್ತರಿಸಲ್ಪಡುವ ಸುಳ್ಳುಗಳನ್ನು ನಂಬಿ ರಾಷ್ಟ್ರ ನಾಯಕರ ತೇಜೋವಧೆ ಮಾಡುತ್ತಿದ್ದಾರೆ. ಇಂಥ ಸುಳ್ಳುಗಳನ್ನು ಒಂದಲ್ಲ ಎರಡಲ್ಲ ನೂರಾರು ಬಾರಿ ಹೇಳಿ ಹೇಳಿ ಅದೇ ಸತ್ಯವೆಂಬಂತೆ ನಂಬಿಸಲಾಗಿದೆ.

ಒಂದೆಡೆ ಮಹಾತ್ಮ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಅವರ ಬಗ್ಗೆ ಇಂಥ ಸುಳ್ಳುಗಳನ್ನು ಸೃಷ್ಟಿಸುತ್ತಲೇ ಇನ್ನೊಂದೆಡೆ ಗಾಂಧೀಜಿ, ಅಂಬೇಡ್ಕರ್ ಶಾಖೆಗೆ ಭೇಟಿ ನೀಡಿದ್ದರು ಎಂದು ಪುರಾವೆಗಳಿಲ್ಲದೇ ಕಟ್ಟುಕಥೆಗಳನ್ನು ಹರಿಬಿಡಲಾಗುತ್ತದೆ. ಅಂಬೇಡ್ಕರ್ ಅವರ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳದಿದ್ದರೂ ಒಳಗಿಂದೊಳಗೆ ಮೀಸಲಾತಿಯ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ .

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದು ಇವರಿಗೆ ಹೊಸದಲ್ಲ.ಇವರ ಚಟುವಟಿಕೆಗಳನ್ನು ಬಲ್ಲ ಶಿರಸಿಯ ಕಾಶ್ಯಪ ಪರ್ಣಕುಟಿ ಅವರು ಈ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅವರ ಅಭಿಪ್ರಾಯದಂತೆ ‘ಬಹುತೇಕ ಆರೆಸ್ಸೆಸ್ ಪ್ರಮುಖ ನಾಯಕರು ಸುಳ್ಳನ್ನು ಸುಂದರವಾಗಿ ಹೇಳಿ ಜನರನ್ನು ನಂಬಿಸಬಲ್ಲ ಸಾಮರ್ಥ್ಯವುಳ್ಳವರು’ ಎಂದು ಅವರು ತಮ್ಮ ಅನುಭವವನ್ನು ಬರೆದಿದ್ದಾರೆ.

ಇಂಥ ಸುಳ್ಳು ಕಥನಗಳ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಅವಿರತವಾಗಿ ನಡೆದಿದೆ. ಮುಂದೇನು ಕಾಲವೇ ಉತ್ತರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News