×
Ad

ಶತಮಾನ ಕಂಡ ಭಾರತ ಕಮ್ಯುನಿಸ್ಟ್ ಪಕ್ಷ

Update: 2025-09-29 09:06 IST

ಸುಲಿಗೆ, ಶೋಷಣೆಗಳಿಲ್ಲದ ನವ ಸಮಾಜವನ್ನು ನಿರ್ಮಿಸುವ ಕನಸನ್ನು ಕಟ್ಟಿಕೊಂಡ ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ ಈ ವರ್ಷ (2025) ಬರೋಬ್ಬರಿ ನೂರು ವರ್ಷ ತುಂಬಿತು. ಒಂದು ಕ್ರಾಂತಿಕಾರಿ ಪಕ್ಷಕ್ಕೆ ನೂರು ವರ್ಷ ತುಂಬಿರುವುದು ಚರಿತ್ರೆಯಲ್ಲಿ ಒಂದು ಮಹತ್ವದ ಘಟ್ಟ. ಜಾತಿ, ಮತಗಳ ಅಡ್ಡಗೋಡೆಗಳನ್ನು ಕೆಡವಿ ವರ್ಗ ರಹಿತ ಸಮಾಜವೊಂದನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಭಾರತದ ಕಮ್ಯುನಿಸ್ಟ್ ಪಕ್ಷ ಹಲವಾರು ಏಳುಬೀಳುಗಳನ್ನು ಕಂಡಿದೆ. ಅದು ನಡೆದು ಬಂದಿರುವುದು ಕಲ್ಲು ಮುಳ್ಳಿನ ದಾರಿಯಲ್ಲಿ. ಬ್ರಿಟಿಷರ ಕಾಲದಿಂದ ಹಾಗೂ ನಂತರದ ಸ್ವಾತಂತ್ರ್ಯದ ಮುಕ್ಕಾಲು ಶತಮಾನದಲ್ಲಿ ಬಂಡವಾಳಶಾಹಿ, ಪಾಳೇಗಾರಿ ಶಕ್ತಿಗಳನ್ನು ಎದುರು ಹಾಕಿಕೊಂಡು ಪ್ರಭುತ್ವದ ನಿರಂತರ ದೌರ್ಜನ್ಯದ ನಡುವೆಯೂ ಕಮ್ಯುನಿಸ್ಟ್ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ಹಲವಾರು ರಾಜ್ಯಗಳಲ್ಲಿ ಆಳವಾಗಿ ಬೇರು ಬಿಟ್ಟಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಚುನಾವಣೆಯಲ್ಲಿ ಸ್ಪರ್ಧಿಸಿ ಶಾಸನ ಸಭೆಗಳಲ್ಲೂ, ಸಂಸತ್ತಿನಲ್ಲಿ ಬಡವರ, ನೊಂದವರ, ಅವಕಾಶ ವಂಚಿತರ, ಸಮಸ್ತ ದುಡಿಯುವ ಜನರ ಧ್ವನಿಯಾಗಿ ಮಹತ್ವದ ಪಾತ್ರವನ್ನು ವಹಿಸಿದೆ. ಕೋಮುವಾದಿ ಕರಾಳ ಶಕ್ತಿಗಳ ವಿರುದ್ಧ ನಿರಂತರ ಹೋರಾಡುತ್ತ ಬಂದಿದೆ.

ಭಾರತದ ಕಮ್ಯುನಿಸ್ಟ್ ಪಕ್ಷ ಯಾವಾಗ ಸ್ಥಾಪನೆಯಾಯಿತು ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. 1920ರಲ್ಲಿ ರಶ್ಯದ ತಾಷ್ಕೆಂಟ್ನಲ್ಲಿ ಸ್ಥಾಪಿಸಲ್ಪಟ್ಟಿತು ಎಂದು ಒಂದು ಅಭಿಪ್ರಾಯ. ಆದರೆ, ಇದನ್ನು ಒಪ್ಪದ ಬಹುದೊಡ್ಡ ಗುಂಪು 1925 ರಲ್ಲಿ ಕಾನಪುರದಲ್ಲಿ ಅಸ್ತಿತ್ವಕ್ಕೆ ಬಂತು ಎಂದು ಪ್ರತಿಪಾದಿಸುತ್ತದೆ.

ಲೆನಿನ್ ಸಮಕಾಲೀನರಾದ ಮಾನವೇಂದ್ರನಾಥ ರಾಯ್ (ಎಂ.ಎನ್.ರಾಯ್) ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲಿ ಪ್ರಮುಖರು. ಕಾನಪುರದಲ್ಲಿ 1925ರ ಡಿಸೆಂಬರ್ 26 ರಂದು ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನಾ ಅಧಿವೇಶನದಲ್ಲಿ ಎಸ್.ಎ.ಡಾಂಗೆ, ಆಜಯ ಘೋಷ್, ಮುಝಪ್ಫ್ಫರ್ ಅಹ್ಮದ್, ಕರ್ನಾಟಕದ ಮಂಗಳೂರಿನ ಎಸ್. ವಿ.ಘಾಟೆ (ಸಚ್ಚಿದಾನಂದ ವಿಷ್ಣು ಘಾಟೆ), ಕೆ.ಎನ್. ಜೋಗಳೇಕರ್, ಎಸ್ .ಹಸನ್ ,ಶೌಕತ್ ಉಸ್ಮಾನಿ ಮೊದಲಾದವರು ಭಾಗವಹಿಸಿದ್ದರು. ಆಗ ಬ್ರಿಟನ್ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಶಾಪೂರ್ಜಿ ಸಕಲತ್ ವಾಲಾ, ರಜನಿ ಪಾಮ ದತ್ತ ಸಂದೇಶ ಕಳಿಸಿದ್ದರು. ಆದರೆ, ಅಂದಿನ ಬ್ರಿಟಿಷ್ ಸರಕಾರ ಈ ಸಮ್ಮೇಳನವನ್ನು ಸರಕಾರದ ವಿರುದ್ಧ ಸಂಚು ಎಂದು ಪರಿಗಣಿಸಿತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿತು. ನಂತರ ರೈಲು ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಾಗ ಮೀರತ್ ಪಿತೂರಿ ಖಟ್ಲೆ ಹಾಕಿ ಎಸ್.ಎ.ಡಾಂಗೆ , ಮುಝಪ್ಫರ್ ಅಹ್ಮದ್, ಎಂ.ಎನ್.ರಾಯ್ ಮೊದಲಾದವರನ್ನು ಬಂಧಿಸಲಾಯಿತು.

ಇನ್ನೊಂದು ಮಾಹಿತಿ ಪ್ರಕಾರ , ಇದಕ್ಕಿಂತ ಮುಂಚೆ 1920ರಲ್ಲಿ ರಶ್ಯದ ತಾಷ್ಕೆಂಟ್ನಲ್ಲಿ ಬೇರೆ ಬೇರೆ ದೇಶಗಳಲ್ಲಿ ಇದ್ದ ಭಾರತೀಯ ಮೂಲದ ಕಮ್ಯುನಿಸ್ಟ್ ಕಾರ್ಯಕರ್ತರು ಸಭೆ ಸೇರಿ ಅದನ್ನು ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪನಾ ಸಮ್ಮೇಳನ ಎಂದು ಕರೆದರು. ಇದರಲ್ಲಿ ಎಂ.ಎನ್ .ರಾಯ್, ಆಚಾರ್ಯ, ಅಬನಿ ಮುಖರ್ಜಿ, ಮುಹಮ್ಮದ್ ಶಫಿ ಮೊದಲಾದವರು ಪಾಲ್ಗೊಂಡಿದ್ದರು. ಇದರಲ್ಲಿ ಆಚಾರ್ಯ ಎಂಬವರು ಮಂಗಳೂರು ಮೂಲದವರೆಂದು ‘ಕಸ್ತೂರಿ’ ಸಂಪಾದಕರಾಗಿದ್ದ ಪಾ.ವೆಂ.ಆಚಾರ್ಯ ಅವರು ಹೇಳುತ್ತಿದ್ದರು. ಪಾವೆಂ ಆಚಾರ್ಯ ಅವರು ಕಮ್ಯುನಿಸ್ಟ್ ಆಚಾರ್ಯರ ಮಂಗಳೂರು ಮೂಲ ಪತ್ತೆ ಹಚ್ಚಲು ನಡೆಸಿದ ಶೋಧ ಕಾರ್ಯ ಸಾಮಾನ್ಯವಾದುದಲ್ಲ. ಈಗ ಅದರ ವಿವರ ಬೇಡ.

ಇದು ಭಾರತದ ಕಮ್ಯುನಿಸ್ಟ್ ಪಕ್ಷ ನಡೆದು ಬಂದ ದಾರಿ. ದೇಶಕ್ಕೆ ಪೂರ್ಣಚಂದ್ರ. ಜೋಶಿ, ಶ್ರೀಪಾದ ಅಮೃತ ಡಾಂಗೆ, ರಾಜೇಶ್ವರರಾವ್, ಜ್ಯೋತಿ ಬಸು, ಭೂಪೇಶ್ ಗುಪ್ತ್ತಾ, ಇ.ಎಂ.ಎಸ್. ನಂಬೂದಿರಿಪ್ಪಾಡ್, ಕವಿ ಮಕ್ದುಮ್ ಮುಹಿ ಯುದ್ದೀನ್ ಮೊದಲಾದ ನಾಯಕರನ್ನು ನೀಡಿದ ಕಮ್ಯುನಿಸ್ಟ್ ಪಕ್ಷ, 1964 ರಲ್ಲಿಇಬ್ಭ್ಬಾಗವಾಗಿ ಮಾರ್ಕ್ಸ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬಂತು. ನಂತರ ಒಡಕಿನ ಚಾಳಿ ವ್ಯಾಪಕವಾಗಿ ದೇಶದಲ್ಲಿ ಈಗ ಹಲವಾರು ಕಮ್ಯುನಿಸ್ಟ್ ಪಕ್ಷಗಳಿವೆ. ಎಲ್ಲ ಕಮ್ಯುನಿಸ್ಟ್ ಪಕ್ಷಗಳಿಗೂ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮಾತೃ ಪಕ್ಷವಾಗಿದೆ. ಈ ಪಕ್ಷಕ್ಕೆ ದಲಿತ ಸಮುದಾಯದಿಂದ ಬಂದ ಡಿ.ರಾಜಾ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿ ಚಂಡಿಗಡದಲ್ಲಿ ಕಳೆದ ವಾರ ನಡೆದ ಮಹಾಧಿವೇಶನದಲ್ಲಿ ಚುನಾಯಿತರಾಗಿದ್ದಾರೆ. ಭಾರತ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಗೊಂಡ ವರ್ಷವೇ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಜನ್ಮ ತಾಳಿತು.

ಇವೆರಡೂ ಬಲ ಮತ್ತು ಎಡಪಂಥೀಯ ಸಂಘಟನೆಗಳು ತಮ್ಮದೇ ಆದ ತಾತ್ವಿಕ ದಿಕ್ಕಿನಲ್ಲಿ ಸ್ವತಂತ್ರ ಭಾರತವನ್ನು ಕೊಂಡೊಯ್ಯುವ ಗುರಿಯನ್ನು ಇಟ್ಟುಕೊಂಡು ಶ್ರಮಿಸುತ್ತಲೇ ಬಂದಿವೆ.

ಜರ್ಮನಿಯ ಅಡಾಲ್ಫ್ ಹಿಟ್ಲರ್ ಮತ್ತು ಇಟಲಿಯ ಮುಸ್ಸೋಲಿನಿಯಿಂದ ಸೈದ್ಧಾಂತಿಕ ಸ್ಫೂರ್ತಿಯನ್ನು ಪಡೆದ ನಾಗಪುರದ ಕೆಲವು ಚಿತ್ಪಾವನ ಬ್ರಾಹ್ಮಣ ತರುಣರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು. ಅದಕ್ಕೂ ಒಂದು ಹಿನ್ನೆಲೆ ಇದೆ. ಜ್ಯೋತಿಬಾ ಫುಲೆ ಮತ್ತು ಕೊಲ್ಲಾಪುರದ ಶಾಹು ಮಹಾರಾಜರು ಜಾತಿ ಪದ್ಧತಿಯ ವಿರುದ್ಧ ಮೂಡಿಸಿದ ಜನ ಜಾಗೃತಿ, ಅದಕ್ಕೂ ಮುನ್ನ ಭೀಮಾ ಕೋರೆಗಾಂವ್ ನಲ್ಲಿ ಪುಣೆಯ ಪೇಶ್ವೆಗಳ ಸೋಲು ಮತ್ತು ಆನಂತರ ಬಾಬಾಸಾಹೇಬರ ಆಗಮನ ಇವೆಲ್ಲದರ ಪರಿಣಾಮವಾಗಿ ಇನ್ನು ಜಾತಿಪದ್ಧತಿಗೆ ಉಳಿಗಾಲವಿಲ್ಲ ಎಂದು ಸಾವರ್ಕರ್ ‘ಹಿಂದುತ್ವ’ದ ಜಪ ಆರಂಭಿಸಿದರು. ನಾಗಪುರದ ತರುಣರು ಅದಕ್ಕೆ ಜರ್ಮನಿ, ಇಟಲಿಗಳಿಂದ ತಂದ ಎರವಲು ಸಿದ್ಧಾಂತಗಳನ್ನು ಸೇರಿಸಿದರು.

ಅದೇ ರೀತಿ ದೇಶದ ಎಲ್ಲ ಜನ ಸಮುದಾಯಗಳ ಹೊಸ ತಲೆಮಾರಿನ ಯುವಕರು ಹಾಗೂ ಅವರೊಂದಿಗೆ ವಿದೇಶದಲ್ಲಿ ವ್ಯಾಸಂಗ ಮಾಡಿದ ಕೆಲ ಶ್ರೀಮಂತ ಮನೆತನಗಳ ವಿದ್ಯಾವಂತ ಯುವಕರು ಭಾರತದ ಕಮ್ಯುನಿಸ್ಟ್ ಚಳವಳಿಗೆ ಚಾಲನೆ ನೀಡಿದರು.

ಮತ್ತೊಂದೆಡೆ ಬ್ರಿಟಿಷ್ ಆಡಳಿತದ ವಿರುದ್ಧ ಜಾತ್ಯತೀತ, ಜನತಾಂತ್ರಿಕ ಸ್ವತಂತ್ರ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ ಗಾಂಧಿ, ನೆಹರೂ, ಅಂಬೇಡ್ಕರ್, ಮೌಲಾನಾ ಆಝಾದ್, ಸುಭಾಶ್ಚ್ಚಂದ್ರ ಬೋಸ್, ಭಗತ್ ಸಿಂಗ್ ಇಂಥ ಉದಾರವಾದಿ, ಪ್ರಗತಿಪರ ಒಲವಿನ ಹೋರಾಟಗಾರರ ಪ್ರಭಾವದಿಂದ ಬಹುತ್ವ ಭಾರತ ಸಮತೆಯತ್ತ ಹೊರಳುತ್ತಿದ್ದ ಕಾಲಘಟ್ಟ ಅದು. ಆಗ ಎಡಪಂಥೀಯರು ಮತ್ತು ಉದಾರವಾದಿಗಳು ತಮ್ಮ ಕನಸಿನ ಜಾತ್ಯತೀತ, ಜನ ತಾಂತ್ರಿಕ ಭಾರತವನ್ನು ಕಟ್ಟುವ ಹಾಗೂ ಅದಕ್ಕೆ ಇನ್ನೊಂದೆಡೆ ತದ್ದಿರುದ್ಧವಾಗಿ ಮನುವಾದಿ ಸನಾತನ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಗುರಿಯೊಂದಿಗೆ ಸಂಘ ಪರಿವಾರ ನಿರಂತರವಾದ ಪ್ರಯತ್ನ ಮಾಡುತ್ತಲೇ ಬಂದಿದೆ.

ಈ ಹಿಂದೂ ರಾಷ್ಟ್ರದ ಗುರಿ ಸಾಧನೆಗಾಗಿ ಸಾವಿರಾರು ಕಾರ್ಯಕರ್ತರು ಮದುವೆಯಾಗಿ ಹಾಗೂ ಮದುವೆಯಾಗದೇ ದುಡಿಯುತ್ತಲೇ ಬಂದರು. ಅವರಿಗೆ ಊಟ, ಬಟ್ಟೆಗೆ ತೊಂದರೆಯಿರಲಿಲ್ಲ. ಯಾಕೆಂದರೆ ಭಾರತದ ಮೇಲ್ವರ್ಗಗಳ ಹಾಗೂ ಮೇಲ್ಜಾತಿಗಳ ಸಿರಿವಂತರು ಆಸರೆಯಾಗಿ ನಿಂತರು. ಇನ್ನೊಂದು ಕಡೆ ಸಮತೆಯ ಭಾರತದ ಸಾಕಾರಕ್ಕಾಗಿ ಸಾವಿರಾರು ಕಮ್ಯುನಿಸ್ಟ್ ಕಾರ್ಯಕರ್ತರು ಬೆವರಿಳಿಸುತ್ತಲೇ ಬಂದರು. ಅನೇಕರು ಬಲಿದಾನ ಮಾಡಿದ್ದಾರೆ. ಮಾರ್ಕ್ಸ್ಸ್ವಾದಿಗಳಾಗಿದ್ದ ಭಗತ್ ಸಿಂಗ್, ಸುಖದೇವ್, ಆಝಾದ್ ಮೊದಲಾದವರು ಹುತಾತ್ಮರಾದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಎಂಬ ಉದಾರವಾದಿ ಸಂಘಟನೆಯ ನೇತೃತ್ವದಲ್ಲಿ ಧುಮುಕಿದ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಕಾರ್ಯಕರ್ತರಲ್ಲಿ ಅನೇಕರು ಬಲಿದಾನ ಮಾಡಿದರು. ಆಗ ಆರೆಸ್ಸೆಸ್ ಯಾರ ಪರವಾಗಿ ಇತ್ತೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇವೆರಡು ಧಾರೆಗಳಲ್ಲದೇ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿತ್ತು. ಆಗ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಪಕ್ಷಗಳು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಚಳವಳಿಯ ಭಾಗವಾಗಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದವು. ಮಗದೊಂದೆಡೆ ತನ್ನ ಪರಿಕಲ್ಪನೆಯ ಹಿಂದೂ ರಾಷ್ಟ್ರ ನಿರ್ಮಿಸಲು ಆರೆಸ್ಸೆಸ್ ನಾನಾ ಕಸರತ್ತುಗಳನ್ನು ನಡೆಸುತ್ತಲೇ ಇದೆ. ಚುನಾವಣಾ ರಾಜಕೀಯದಲ್ಲಿ ಅದರ ರಾಜಕೀಯ ವೇದಿಕೆ ಈಗ ಯಶಸ್ಸಿನ ದಾರಿಯಲ್ಲಿ ಇದೆ.

ಕಾರ್ಪೊರೇಟ್ ಕಂಪೆನಿಗಳಿಂದ ಅದಕ್ಕೆ ನೂರಾರು ಕೋಟಿ ಹಣ ಹರಿದು ಬರುತ್ತಲೇ ಇದೆ. ಯಾವುದೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಅಲ್ಲಿನ ಫಲಿತಾಂಶವನ್ನೇ ತನ್ನ ಪರವಾಗಿ ಬದಲಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿದೆ. ಈಗ ಅದು ಮತಗಳ್ಳತನದ ಆರೋಪವನ್ನು ಎದುರಿಸುತ್ತಿದೆ.ದಶಕಗಳಿಂದ ಕಮ್ಯುನಿಸ್ಟರ ಕೋಟೆಯಾಗಿದ್ದ ತ್ರಿಪುರಾ ಕೇಸರಿ ಪಡೆಯ ಕೈವಶವಾಗಿದೆ. ಪ್ರತ್ಯೇಕತಾವಾದಿ ಸಂಘಟನೆಯಾದ ತ್ರಿಪುರಾ ಮೂಲ ನಿವಾಸಿ ಜನಜಾತಿ ರಂಗದೊಂದಿಗೆ ಮಾಡಿಕೊಂಡ ಮೈತ್ರಿ ಬಿಜೆಪಿಯ ಗೆಲುವಿಗೆ ನೆರವಾಗಿದೆ. ಕಾಶ್ಮೀರದಲ್ಲಿ ತಾನೇ ದೇಶವಿರೋಧಿ ಎಂದು ಆರೋಪಿಸಿದ್ದ ಪಕ್ಷದೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡವರಿಗೆ ತ್ರಿಪುರಾದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಕೋಚವೆನಿಸಲಿಲ್ಲ.

ತ್ರಿಪುರಾದಲ್ಲಿ ಕಾಲು ಶತಮಾನ ಕಾಲ ಆಳಿದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಯಾವ ಸಾಧನೆಯನ್ನೂ ಮಾಡಲೇ ಇಲ್ಲವೆಂದಲ್ಲ. ಹಿಂದೆಲ್ಲ ಹಿಂಸೆಯಿಂದ ತತ್ತರಿಸಿ ಹೋಗಿದ್ದ ಈ ಪುಟ್ಟ ರಾಜ್ಯ ಕಳೆದ ಎರಡು ದಶಕಗಳಿಂದ ನೆಮ್ಮದಿಯಾಗಿತ್ತು .

ರಾಜ್ಯವನ್ನು ಜನಾಂಗೀಯ ಕಲಹ ಮತ್ತು ಪ್ರತ್ಯೇಕತಾವಾದಿಗಳ ದಳ್ಳುರಿಯಿಂದ ಮುಕ್ತಗೊಳಿಸಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರಜಾಪ್ರಭುತ್ವಕ್ಕೆ ಕಳಂಕವಾದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಗೊಳಿಸಿದ್ದು ಸಣ್ಣ ಸಾಧನೆಯೇನಲ್ಲ. ಹಿಂದಿನ ಮುಖ್ಯಮಂತ್ರಿ ನೃಪೇನ್ ಚಕ್ರವರ್ತಿ ಹಾಗೂ ಈಗ ನಿರ್ಗಮಿಸಿರುವ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸರಳತೆ, ಪ್ರಾಮಾಣಿಕತೆಯ ಬಗ್ಗೆ ಎರಡು ಮಾತಿಲ್ಲ. ಅದನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೂ ತ್ರಿಪುರಾವನ್ನು ಮತ್ತೆ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಏಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಸಿಪಿಎಂ ಕೇಂದ್ರ ಸಮಿತಿ ಪರಾಮರ್ಶಿಸಿ ಹೇಳಿಕೆ ನೀಡಿತು . ಏನೇ ಹೇಳಿಕೆ ನೀಡಿದರೂ ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಂತೆ ತ್ರಿಪುರಾದಲ್ಲಿ ಕೂಡ ಸಿಪಿಎಂ ಇನ್ನು ಮುಂದೆ ವಿರೋಧ ಪಕ್ಷವಾಗಿಯೇ ಇರಬೇಕಾಗಿದೆ.

ಭಾರತದಲ್ಲಿ ಜಾಗತೀಕರಣದ ಪ್ರವೇಶವಾದ ಆನಂತರ ಜನರ ಆಶೋತ್ತರಗಳು ಬದ ಲಾಗಿವೆ. ಅದರಲ್ಲೂ ಮೂವತ್ತರ ಒಳಗಿನ ಯುವಕರ ಕನಸುಗಳೇ ಭಿನ್ನವಾಗಿವೆ. ಈ ಹೊಸ ಪೀಳಿಗೆಗೆ ಹೋರಾಟದ ಹಿನ್ನೆಲೆಯಿಲ್ಲ. ಮಾರುಕಟ್ಟೆಯ ಥಳಕು ಬಳುಕಿನ ಜಗತ್ತು ಅವರನ್ನು ವಿಚಲಿತರನ್ನಾಗಿ ಮಾಡಿದೆ. ಇಂತಹ ಮೂವತ್ತರೊಳಗಿನ ಯುವಕರು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟಿದ್ದಾರೆ. ಯಾವುದೇ ಚುನಾವಣೆಯಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಅಮಿತ್ ಶಾರಂತಹ ವ್ಯಾಪಾರಿಗಳು ರಾಜಕೀಯ ನಾಯಕರಾಗಿ ಮೆರೆಯುತ್ತಿರುವ ಇಂದಿನ ಕಾಲದಲ್ಲಿ ವಾಸಕ್ಕೊಂದು ಮನೆಯೂ ಇಲ್ಲದ, ಸ್ವಂತ ವಾಹನವಿಲ್ಲದ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಮಾಣಿಕ್ ಸರ್ಕಾರ್ ಜನತೆಯ ಸಹಜ ಆಯ್ಕೆ ಆಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ.ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವಲ್ಲ.

ಸರಳತೆಗೆ ಹೆಸರಾದ ಇನ್ನೊಬ್ಬ ಕಮ್ಯುನಿಸ್ಟ್ ನಾಯಕ ಭೂಪೇಶ್ ಗುಪ್ತಾ. ಮೂರು ದಶಕಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದರು. ಅವರಿಗೆ ಮದುವೆಯಾಗಿರಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ನಗರದಲ್ಲಿ ಓಡಾಡಲು ಸಿಟಿ ಬಸ್ಗಳನ್ನು ಬಳಸುತ್ತಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಗೃಹಸಚಿವರಾಗಿದ್ದವರು ಇಂದ್ರಜಿತ್ ಗುಪ್ತಾ, ಇಂದ್ರಜಿತ್ ಗುಪ್ತಾ ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬಂದವರು. ಲಂಡನ್ನಲ್ಲಿ ವ್ಯಾಸಂಗ ಮಾಡಿ ಬಂದಿದ್ದ ಅವರು ಗೃಹಮಂತ್ರಿಯಾಗಿದ್ದಾಗ ಸರಕಾರಿ ಬಂಗಲೆಗೆ ಹೋಗಲಿಲ್ಲ. ಲೋಕಸಭಾ ಸದಸ್ಯರಿಗೆ ನೀಡುವ ಸಾದಾ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಅಂತಹ ಇಂದ್ರಜಿತ್ ಗುಪ್ತಾ 1983ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಚಾರಕ್ಕೆ ಬಂದಾಗ ಅವರೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ಒಂದೇ ವಾಹನದಲ್ಲಿ ಪ್ರಯಾಣ ಮಾಡಿದ ನೆನಪನ್ನು ಮರೆಯಲು ಸಾಧ್ಯವಿಲ್ಲ. ದಾರಿಯುದ್ದಕ್ಕೂ ತಮಾಷೆಯ ಮಾತನ್ನಾಡುತ್ತ ಬಂದ ಗುಪ್ತಾ ಚಿತ್ರದುರ್ಗದ ಸಾಮಾನ್ಯ ದಾಬಾವೊಂದರ ಮುಂದೆ ವಾಹನ ನಿಲ್ಲಿಸಿ ಊಟ ಮಾಡಿದ್ದರು. ಮುಂದೆ ದಾವಣಗೆರೆಗೆ ಬಂದಾಗ ಅಲ್ಲಿನ ರಾಜನಹಳ್ಳಿಯ ಹನುಮಂತಪ್ಪ ಛತ್ರದ ಪಕ್ಕದ ಸುನಂದ ರಂಗಮಂಟಪದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಗುಪ್ತಾ ಮಾತನಾಡಿದ್ದರು.

ಅಲ್ಲಿನ ಸಭೆ ಮುಗಿಸಿ ಹುಬ್ಬಳ್ಳಿ ತಲುಪಿದಾಗ ರಾತ್ರಿ 10 ಗಂಟೆ. ಅಲ್ಲಿನ ಸರಾಪ ಕಟ್ಟೆಯಲ್ಲಿ ಅವರ ಭಾಷಣ ಕೇಳಲು 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇಂತಹ ಅನೇಕ ಸರಳ ಮತ್ತು ಅರ್ಪಣಾ ಮನೋಭಾವದ ನಾಯಕರನ್ನು ನೀಡಿದ ಕಮ್ಯುನಿಸ್ಟ್ ಪಕ್ಷಗಳು ಈಗಿನ ಹೊಸಜಗತ್ತಿನ ಸವಾಲುಗಳಿಗೆ ಸ್ಪಂದಿಸಲು ಪ್ರಯಾಸ ಪಡುತ್ತಿವೆ. ಹೊಸ ಪೀಳಿಗೆಯ ಯುವಕರ ಮನಸ್ಸಿನ ಕದವನ್ನು ತಟ್ಟುತಿವೆೆ.ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕ ಚಳವಳಿಯಲ್ಲಿ ಬರುವ ಯುವಕರು ಆರ್ಥಿಕ ಬೇಡಿಕೆಗಳಿಗೆ ಸೀಮಿತಗೊಂಡಿರುತ್ತಾರೆ. ಒಮ್ಮೆ ಸಂಸದೀಯ ರಾಜಕಾರಣವನ್ನು ಒಪ್ಪಿಕೊಂಡ ಆನಂತರ ಅದಕ್ಕೆ ಪೂರಕವಾದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲೂ ಭಾರತದ ಕಮ್ಯುನಿಸ್ಟ್ ಚಳವಳಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಜ್ಯೋತಿ ಬಸು ಪ್ರಧಾನಿಯಾಗುವ ಅವಕಾಶ ಬಾಗಿಲಿಗೆ ಬಂದಾಗ ಅದನ್ನು ತಿರಸ್ಕರಿಸಿದ್ದು ಬಹುದೊಡ್ಡ ಲೋಪವೆಂದರೆ ತಪ್ಪಿಲ್ಲ. ಆಗ ಬಸು ಪ್ರಧಾನಿಯಾಗಿದ್ದರೆ, ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ.ಕಮ್ಯುನಿಸ್ಟರು ಮಾಡಿದ ಇನ್ನೊಂದು ಪ್ರಮಾದವೆಂದರೆ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದು. ಒಂದು ಕಾಲದಲ್ಲಿ ಹರ್ ಕಿಶನ್ ಸಿಂಗ್ ಸುರ್ಜೀತ್, ಜ್ಯೋತಿ ಬಸು ಅಂತಹ ನಾಯಕರು ಪಕ್ಷಕ್ಕೆ ಸಮರ್ಥ ನಾಯಕತ್ವ ನೀಡಿ ಮುನ್ನಡೆಸಿದ್ದರು. 2004ರವರೆಗೆ ಲೋಕಸಭೆಯಲ್ಲಿ ಎಡಪಕ್ಷಗಳ ಸಂಖ್ಯಾಬಲ ಅರುವತ್ತರ ಅಂಕೆಯನ್ನು ದಾಟಿತ್ತು. ಆದರೆ ಸುರ್ಜೀತ್ ಅವರ ನಿರ್ಗಮನದ ಆನಂತರ ಎಡಪಕ್ಷಗಳಿಗೆ ಸಮರ್ಥ ನಾಯಕತ್ವ ಸಿಗಲಿಲ್ಲ. ಪ್ರಕಾಶ್ ಕಾರಟ್ ಕಾರ್ಯದರ್ಶಿಯಾಗಿದ್ದಾಗ ಅಮೆರಿಕದ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದ ನೆಪ ಮುಂದೆ ಮಾಡಿಕೊಂಡು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದರು. ಆಗ ಮುಗ್ಗರಿಸಿದ ಕಮ್ಯುನಿಸ್ಟ್ ಚಳವಳಿ ಮತ್ತೆ ಚೇತರಿಸಲೇ ಇಲ್ಲ. ಆನಂತರ ಬಂದ ಸೀತಾರಾಮ್ ಯೆಚೂರಿಯವರಂತಹವರು ಕಳೆದ ವರ್ಷ ನಿರ್ಗಮಿಸಿದರು. ನಾನಾ ಕಾರಣಗಳಿಂದ ಹಿನ್ನಡೆ ಅನುಭವಿಸಿದ ಈ ದೇಶದ ಕಮ್ಯುನಿಸ್ಟ್ ಚಳವಳಿ ಮತ್ತೆ ಚೇತರಿಸಿತೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇನ್ನೊಂದೆಡೆ ಬದಲಾದ ಅಂತರ್ರಾಷ್ಟ್ರೀಯ ಪರಿಸ್ಥಿತಿಯನ್ನು ಬಳಸಿಕೊಂಡ ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿವೆ. ಇಂಥ ಗಂಭೀರ ಸನ್ನಿವೇಶದಲ್ಲಿ ಮುಂದೇನು ಎಂಬ ಪ್ರಶ್ನೆ ನಮ್ಮ ಎದುರಿಗೆ ಸಹಜವಾಗಿ ಬಂದು ನಿಲ್ಲುತ್ತದೆ. ಕಮ್ಯುನಿಸ್ಟರು ಈಗ ಹೊಸ ದಾರಿಯನ್ನು ಹುಡುಕಬೇಕಾಗಿದೆ.ಪರಿಸ್ಥಿತಿ ಹೀಗೇ ಇರುವುದಿಲ್ಲ. ಬೆಳಕಿನ ಹೊಸ ದಿನಗಳು ಬರಬಹುದು. ಸೋವಿಯತ್ ರಶ್ಯದ ಸಮಾಜವಾದ ವ್ಯವಸ್ಥೆ ಕುಸಿದು ಬೀಳುತ್ತಿದ್ದಂತೆ ಜಗತ್ತಿನಾದ್ಯಂತ ಸಮಾಜವಾದ ಹಳೆಯದಾಯಿತು,ಅದೀಗ ಅಪ್ರಸ್ತುತ ಎಂಬ ನಿಟ್ಟುಸಿರಿನ ಸ್ವರ ಗಳು ಬಂದವು.ಆದರೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ.ಬದಲಾವಣೆಯ ಒಂದು ಪ್ರಯೋಗ ವಿಫಲವಾದರೆ ಎಲ್ಲ ಮುಗಿದು ಹೋಯಿತೆಂದಲ್ಲ. ರಶ್ಯದ ಪ್ರಯೋಗಕ್ಕೆ ಹಿನ್ನಡೆಯಾದರೆ ಸಿದ್ಧಾಂತ ಅಪ್ರಸ್ತುತವಾಗುವುದಿಲ್ಲ. ಜರ್ಮನಿ ,ಇಟಲಿ ದೇಶ ಏಳೂವರೆ ದಶಕದ ಹಿಂದೆ ಭಯಾನಕ ಸ್ವರೂಪ ತಾಳಿದ್ದ ಫ್ಯಾಶಿಸಮ್ ಈಗ ಬೇರೆ ಬೇರೆ ರೂಪ ತಾಳಿ ಹೂಂಕರಿಸಿರುವಾಗ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅಸಮಾನತೆ ವಕ್ಕರಿಸಿರುವಾಗ ಸಮಾನತೆಯ ಸಮಾಜವನ್ನು ಕಟ್ಟಲು ಸಮಾಜವಾದ ಬಿಟ್ಟರೆ ಬೇರೆ ದಾರಿಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸನತ್ ಕುಮಾರ ಬೆಳಗಲಿ

contributor

Similar News