×
Ad

ಸಂವಾದಗಳು ಸತ್ತು ಹೋದ ಕಾಲವಿದು

Update: 2025-11-24 12:16 IST

ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ್ಲ. ಅದು ನಮಗೆ ಇಷ್ಟವಾಗದಿದ್ದರೆ ಸಂಬಂಧಪಟ್ಟ ವಿಷಯಗಳಿಗೆ ಸೀಮಿತವಾಗಿ ಉತ್ತರ ನೀಡಬಹುದು. ಆದರೆ ಬರೆದವರ ವ್ಯಕ್ತಿಗತ ನಿಂದನೆ, ಅವಹೇಳನ ಮಾಡುವುದು ಸರಿಯಲ್ಲ.

ಪ್ರಜಾಪ್ರಭುತ್ವ ಅಂದರೆ ಏನು ಎಂಬ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳು ಬಂದಿವೆ. ಬರುತ್ತಿವೆ. ಉಳಿದುದೇನೇ ಇರಲಿ, ಈ ಜನತಂತ್ರ ವ್ಯವಸ್ಥೆಯ ಮೂಲ ಸ್ವರೂಪವೆಂದರೆ ಇಲ್ಲಿ ಮುಕ್ತ ಮಾತುಕತೆಗೆ ಮೊದಲ ಆದ್ಯತೆ. ಹಲವಾರು ಭಾಷೆ, ಮತ ಧರ್ಮಗಳು, ಸಂಸ್ಕೃತಿಗಳು ನೆಲೆಗೊಂಡಿರುವ ನಮ್ಮ ದೇಶದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಯಾವುದೇ ರಾಜಕೀಯ, ತಾತ್ವಿಕ ಮತಭೇದವನ್ನು ಪರಸ್ಪರ ಮಾತುಕತೆ, ಸಂವಾದ ಮೂಲಕ ಬಗೆಹರಿಸುವುದು ಈ ವ್ಯವಸ್ಥೆಯ ಜೀವ ಸತ್ವ.

ಇದು ಉಳ್ಳವರ ಪ್ರಜಾಪ್ರಭುತ್ವವಾದರೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಚರ್ಚೆ, ಸಂವಾದಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ಪ್ರತೀತಿ ಇದಕ್ಕಿದೆ. ಆದರೆ, ಈ ಸಂವಾದ ಸಂಸ್ಕೃತಿಯೇ ಈಗ ಅಪಾಯದಲ್ಲಿದೆ. ಭಿನ್ನ ಅಭಿಪ್ರಾಯಗಳನ್ನು ಹೊಂದಿದವರು ಪರಸ್ಪರ ಮಾತನಾಡುವುದೇ ಅಪರೂಪವಾದ ದಿನಗಳಿವು. ಚರ್ಚೆ, ಸಂವಾದಗಳನ್ನು ಇಷ್ಟಪಡದಿರುವವರು ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಈ ಅಸಹನೆ ಯಾವ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದತ್ತ ಕಣ್ಣು ಹಾಯಿಸಿದರೆ ಗೊತ್ತಾಗುತ್ತದೆ. ಯಾವುದೇ ವೈಯಕ್ತಿಕ ಪರಿಚಯ, ಜಗಳ ದ್ವೇಷ ಇಲ್ಲದಿದ್ದರೂ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಯಾವುದೇ ಸ್ಟೇಟಸ್ ಹಾಕಿದರೆ ಸಾಕು ಅದನ್ನು ವಿರೋಧಿಸುವವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಅದರ ಬದಲಿಗೆ ಸ್ಟೇಟಸ್ ಹಾಕಿದವರ ಮೇಲೆ ವೈಯಕ್ತಿಕ ದಾಳಿಗೆ ಇಳಿಯುತ್ತಾರೆ. ಅತ್ಯಂತ ಅವಾಚ್ಯ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡುತ್ತಾರೆ. ಇದಕ್ಕೆ ಕಾರಣವೆಂದರೆ ಯಾವುದೇ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ಅವರಿಗಿರುವುದಿಲ್ಲ ಅಥವಾ ಅವರು ಪ್ರತಿಪಾದಿಸುವ ಸಿದ್ಧಾಂತಕ್ಕೂ ಆ ಸಾಮರ್ಥ್ಯ ಇರುವುದಿಲ್ಲ. ಆಗ ಅವರು ಅನುಸರಿಸುವ ಮಾರ್ಗ ಅಶ್ಲೀಲ ಶಬ್ದಗಳ ಧಾರಾಳ ಬಳಕೆ. ಇಂಥ ಹೊಲಸು ಶಬ್ದಗಳನ್ನು ಬಳಸಿ ಅವರ ರಾಜಕೀಯ ಇಲ್ಲವೇ ಸಾಮಾಜಿಕ ಅಥವಾ ಸೈದ್ಧಾಂತಿಕ ವಿರೋಧಿಗಳ ಬಾಯಿ ಮುಚ್ವಿಸಲು ಯತ್ನಿಸುತ್ತಾರೆ. ಇಂಥವರ ಜೊತೆಗೆ ಯಾಕೆ ಕಿತ್ತಾಡುವುದೆಂದು ನಾವು ಮೌನವನ್ನು ತಾಳುತ್ತೇವೆ. ಈ ರೀತಿ ಅಕ್ಷರ ಗೂಂಡಾಗಿರಿಯ ಮೂಲಕ ಸೈದ್ಧಾಂತಿಕ ವಿರೋಧಿಗಳ ಧ್ವನಿ ಯಾರಿಗೂ ಕೇಳದಂತೆ ಮಾಡುವುದು ಇವರ ಮಸಲತ್ತು. ನಮ್ಮ ನೆಲದಲ್ಲಿ ಅಸಹನೆ, ದ್ವೇಷ, ಹೊಸದಲ್ಲ. ಯಾರು ಏನೇ ಹೇಳಲಿ ಇಲ್ಲಿ ಸಂವಾದಗಳು ನಡೆದದ್ದು ಬಹಳ ಅಪರೂಪ. ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳನ್ನು ಮತ್ತು ಅಸಮಾನತೆ ವಿರೋಧಿಸುವವರನ್ನು ಈ ವ್ಯವಸ್ಥೆ ಸಹಿಸುವುದಿಲ್ಲ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಸಮಾಜ ಸುಧಾರಣೆಗೆ ಮುಂದಾದ ಬಸವಣ್ಣನವರನ್ನು ಈ ವ್ಯವಸ್ಥೆ ಬಲಿ ತೆಗೆದುಕೊಂಡಿತು. ಅದಕ್ಕಿಂತ ಮೊದಲು ಚಾರ್ವಾಕರನ್ನು ಮತ್ತು ಬೌದ್ಧ ಹಾಗೂ ಜೈನ ಧರ್ಮಗಳನ್ನು ನಾಶ ಮಾಡಿದರು. ಅವು ಈಗ ಹೇಗೋ ಬದುಕಿ ಉಸಿರಾಡುತ್ತಿವೆ. ಮಹಾರಾಷ್ಟ್ರದ ಸಂತ ತುಕಾರಾಮ ಮತ್ತು ಸಂತರು (ಶಿವಾಜಿ ಸಾವು ಕೂಡ ನಿಗೂಢ) ಇವರ ಅಸಹನೆಗೆ ಬಲಿಯಾದರು. ಸ್ವಾತಂತ್ರ್ಯ ನಂತರ ಮಹಾತ್ಮಾ ಗಾಂಧಿಯವರು ಇಂಥವರಿಂದಲೇ ಕೊಲ್ಲಲ್ಪಟ್ಟರು.

ಕೋಮುವಾದಿಗಳು ಪ್ರಾಬಲ್ಯ ಗಳಿಸಿದ ನಂತರ ಅಸಹನೆಯ, ದೈಹಿಕ ದಾಳಿಯ ಘಟನೆಗಳು ಹೆಚ್ಚಾಗುತ್ತಲೇ ಇವೆ. ತಮ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳದವರನ್ನು ಮುಗಿಸುತ್ತಲೇ ಬಂದಿದ್ದಾರೆ.

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪ್ರಶಾಂತ್ ಭೂಷಣ್ ಅವರ ಮೇಲೆ ಅವರ ಕಚೇರಿಯಲ್ಲೇ ಹಲ್ಲೆ ಮಾಡಿದರು. ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾವಿದ ಎಂ.ಎಫ್.ಹುಸೇನ್ ಅವರು ರಚಿಸಿದ ಕಲಾಕೃತಿಗಳನ್ನು ನೆಪವಾಗಿಟ್ಟುಕೊಂಡು ಕಂಡ, ಕಂಡಲ್ಲೆಲ್ಲ ಅವರ ಮೇಲೆ ಹಲ್ಲೆ ಮಾಡಿದರು. ಕೊನೆಗೆ ಹತಾಶರಾದ ಹುಸೇನ್ ದುಬೈಗೆ ಹೋಗಿ ನೆಲೆಸಿದರು. ಹರ್ಯಾಣದ ಜೀತದಾಳುಗಳ ಏಳಿಗೆಗಾಗಿ ಶ್ರಮಿಸುತ್ತಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಜಾರ್ಖಂಡ್ ಮತ್ತು ದಿಲ್ಲಿಯಲ್ಲಿ ಹಲ್ಲೆ ಮಾಡಿ ನೆಲದ ಮೇಲೆ ಎಳೆದಾಡಿ ಹೊಡೆದರು. ಅಹ್ಮದಾಬಾದ್‌ನಲ್ಲಿ ಸರ್ದಾರ್ ಸರೋವರ ಅಣೆಕಟ್ಟೆಯ ಸಂತ್ರಸ್ತರ ಪರವಾಗಿ ಹೋರಾಟವನ್ನು ರೂಪಿಸಲು ಬಂದಿದ್ದ ಮೇಧಾ ಪಾಟ್ಕರ್ ಅವರ ಮೇಲೆ ಗೂಂಡಾಗಿರಿ ನಡೆಸಿದರು. ನಮ್ಮ ನಾಡಿನ ಹಿರಿಯ ಲೇಖಕ ಡಾ.ಯು.ಆರ್.ಅನಂತಮೂರ್ತಿ ಅವರಿಗೆ ವಿಪರೀತ ಮಾನಸಿಕ ಹಿಂಸೆ ನೀಡಿದರು. ಅವರು ಕೊನೆಯುಸಿರೆಳೆದಾಗ ಪಟಾಕಿ ಹಾರಿಸಿ ಸಂಭ್ರಮಿಸಿದರು. ಗಿರೀಶ್ ಕಾರ್ನಾಡ್ ಅವರಿಗೂ ಸಾಕಷ್ಟು ಕಿರುಕುಳ ನೀಡಿದರು. ಇಂಥ ನೂರಾರು ಉದಾಹರಣೆಗಳನ್ನು ನೀಡಬಹುದು.

ಈ ಕಹಿ ಅನುಭವ ನನ್ನದೂ ಕೂಡ. ಸುಮಾರು ನಲವತ್ತೆಂಟು ವರ್ಷಗಳಿಂದ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬರೆಯಲು ಆರಂಭಿಸಿದ ನಾನು ಎಡಪಂಥೀಯ ವಿಚಾರಗಳ ಪ್ರಭಾವದ ಕಾರಣದಿಂದ ಕೋಮುವಾದ ಮತ್ತು ಜಾತಿವಾದಗಳನ್ನು ವಿರೋಧಿಸುತ್ತಲೇ ಬಂದೆ. ಆಗೆಲ್ಲ ಈ ಮೊಬೈಲು, ಫೇಸ್ ಬುಕ್ ಇದಾವುದೂ ಇರಲಿಲ್ಲ. ಆದರೆ ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಪತ್ರಿಕೆಗಳು ಅಲ್ಲಲ್ಲಿ ಪ್ರಕಟವಾಗುತ್ತಿದ್ದವು. ನಾನು ನಮ್ಮ ಬಿಜಾಪುರ ಜಿಲ್ಲೆಯ ಅಂಥ ಸಣ್ಣ ಪತ್ರಿಕೆಗಳಿಗೆ ಆಗಾಗ ಬರೆಯುತ್ತಿದ್ದೆ. ಆಗ ಕೋಮುವಾದಿ ಸಂಘಟನೆಗಳ ಪ್ರಭಾವ ಅಷ್ಟೊಂದು ಇರಲಿಲ್ಲ. ಆದರೂ ಅಲ್ಲಲ್ಲಿ ಕೆಲವು ಭಕ್ತರಿದ್ದರು. ಅವರು ಸ್ಥಳೀಯ ಪತ್ರಿಕೆಗಳಲ್ಲೇ ನನಗೆ ಉತ್ತರ ನೀಡಲು ಪ್ರಯತ್ನಿಸುತ್ತಿದ್ದರು. ಮುಂದೆ ನಾನು ಖಾದ್ರಿ ಶಾಮಣ್ಣನವರು ಸಂಪಾದಕರಾಗಿದ್ದಾಗ ಆಗ ರಾಜ್ಯ ಮಟ್ಟದ ಬಹು ಪ್ರಸಾರ ಸಂಖ್ಯೆಯ ದಿನ ಪತ್ರಿಕೆಯಾಗಿದ್ದ ‘ಸಂಯುಕ್ತ ಕರ್ನಾಟಕ’ವನ್ನು ಸೇರಿ ಅಲ್ಲೂ ಆಗಾಗ ಬರೆಯಲು ಆರಂಭಿಸಿದೆ. ಆಗಲೂ ಸಹಿಸಲಾಗದ ಕೋಮುವಾದಿಗಳು ವೈಯಕ್ತಿಕವಾಗಿ ದಾಳಿ ಮಾಡುತ್ತಲೇ ಬಂದರು.

ನಾನು ‘ಸಂಯುಕ್ತ ಕರ್ನಾಟಕ’ದಲ್ಲಿ ಬರೆಯುತ್ತಿದ್ದ ‘ವಿಶ್ವ ಪ್ರದಕ್ಷಿಣೆ’ ಎಂಬ ಅಂಕಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಂಪಾದಕರಿಗೂ ಪತ್ರ ಬರೆಯುತ್ತಿದ್ದರು. ಉತ್ತರಿಸಲಾಗದ ಸವಾಲುಗಳು ಎದುರಾದಾಗ ಪ್ರಶ್ನಿಸಿದವರ ಮೇಲೆ ಅಕ್ಷರ ಗೂಂಡಾಗಿರಿಗೆ ಇಳಿಯುತ್ತಾರೆ. ಅದಕ್ಕೂ ಮಣಿಯದಿದ್ದರೆ ದೈಹಿಕ ದಾಳಿಗೆ ಮುಂದಾಗುತ್ತಾರೆ. ಮಹಾರಾಷ್ಟ್ರದ ಅಂಧಶ್ರದ್ಧೆ ವಿರೋಧಿ ಹೋರಾಟಗಾರರಾದ ಡಾ.ನರೇಂದ್ರ ದಾಭೋಲ್ಕರ್, ಶಿವಾಜಿಯ ನೈಜ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಕೊಲ್ಲಾಪುರದ ಹೆಸರಾಂತ ಲೇಖಕ ಗೋವಿಂದ ಪನ್ಸಾರೆ, ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂದು ಪುರಾವೆಗಳ ಸಹಿತ ಪ್ರತಿಪಾದಿಸಿದ ಧಾರವಾಡದ ಡಾ.ಎಂ.ಎಂ.ಕಲಬುರ್ಗಿ, ಕೋಮುವಾದ, ಮನುವಾದದ ವಿರುದ್ಧ ನೇರ ವೈಚಾರಿಕ ಸಮರವನ್ನು ಸಾರಿದ ಗೌರಿ ಲಂಕೇಶ್ ಇವರೆಲ್ಲರೂ ಬಲಿಯಾಗಿದ್ದು ಇದೇ ಗೋಡ್ಸೆ ಮನಸ್ಥಿತಿಯ ಅಸಹನೀಯ ಅತಿರೇಕಕ್ಕೆ ಎಂಬುದು ಗುಟ್ಟಿನ ಸಂಗತಿಯಲ್ಲ.

ಸಾಮಾಜಿಕ ಜೀವನದಲ್ಲಿ ಇಂಥ ಅಸಹನೆ ಅತಿರೇಕಕ್ಕೆ ಹೋದಾಗ ಕೆಲವು ಸಲ ಸಾಧು, ಸಂತರು ಅದನ್ನು ತಡೆಯಲು ಮಧ್ಯಪ್ರವೇಶ ಮಾಡುತ್ತಾರೆ. ಆದರೆ ಈಗಿನ ದುರಂತವೆಂದರೆ ಈ ಸ್ವಾಮಿಗಳು, ಮಠಾಧೀಶರು ಈಗ ಕೋಮುವಾದಿಗಳ ಅಸಹನೆಯ ಅಸ್ತ್ರವಾಗಿ ದುರ್ಬಳಕೆಯಾಗುತ್ತಿದ್ದಾರೆ. ಅಯೋಧ್ಯೆಯ ಬಾಬರಿ ಮಸೀದಿ ತಮ್ಮ ಕಣ್ಣೆದುರಿಗೇ ನಾಶವಾಗುತ್ತಿರುವಾಗಲು ಉಡುಪಿಯ ಮಠಾಧೀಶರಾಗಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಮೌನ ವೀಕ್ಷಕರಾಗಿದ್ದರು. ಈಗ ಕೋಮುವಾದಿಗಳ ಹೊಸ ಅಸ್ತ್ರವೆಂದರೆ ಕನೇರಿ ಸ್ವಾಮಿಗಳು ಅಂದರೆ ತಪ್ಪಿಲ್ಲ. ಬಸವಣ್ಣನವರ ಸಂದೇಶವನ್ನು ನಾಡಿನ ಎಲ್ಲ ಜನರಿಗೆ ತಲುಪಿಸಲು ಯಾತ್ರೆ ಹೊರಟ ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ, ಅಸಭ್ಯ ಅವಹೇಳನಕಾರಿ ಮಾತುಗಳನ್ನು ಆಡಿದ ಕನೇರಿ ಸ್ವಾಮಿಗಳ ವಿರುದ್ಧ ಉತ್ತರ ಕರ್ನಾಟಕದ ಲಿಂಗಾಯತರು ಮಾತ್ರವಲ್ಲ ಜನ ಸಾಮಾನ್ಯರು ಸಿಡಿದೆದ್ದಿದ್ದಾರೆ.

ಆದರೆ, ಇನ್ನೊಂದೆಡೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತ ಸ್ವಾಮಿಗಳನ್ನು ಬೈದ ಕನೇರಿ ಸ್ವಾಮಿಯ ಪರವಾಗಿ ಕೆಲವರು ಪ್ರತಿಭಟಿಸುತ್ತಿದ್ದಾರೆ. ಇದೊಂದು ವಿಚಿತ್ರ ಕಾಲ. ಬೈಯಿಸಿ ಕೊಂಡವರ ಬದಲಿಗೆ ಬೈದ ಸ್ವಾಮಿಯ ಪರವಾಗಿ ಚಳವಳಿಗಳು ನಡೆದಿವೆ. ಇದು ನಾಡಿನ ದುರಂತ.

ಒಂದು ಕಾಲವಿತ್ತು, ಕಾವಿ ಧರಿಸಿದ ಸ್ವಾಮಿಗಳು, ಮಠಾಧೀಶರು, ಸಾಧು ಸಂತರ ಬಗ್ಗೆ ಗೌರವ ಭಾವನೆ ಮೂಡುತ್ತಿತ್ತು. ಅವರ ಬಾಯಿಯಿಂದ ಕೆಟ್ಟ ಮಾತುಗಳು ಬರುತ್ತಿರಲಿಲ್ಲ. ಬಿಜಾಪುರದ ಸಿದ್ಧೇಶ್ವರ ಸ್ವಾಮಿಗಳು ಕೋಮುವಾದಿಗಳ ಪರ ಸೌಮ್ಯ ಧೋರಣೆಯನ್ನು ಹೊಂದಿದವರು ಎಂಬ ಆರೋಪವಿದ್ದರೂ ಅವರೆಂದೂ ಯಾರಿಗೂ ಒರಟು ಮತ್ತು ಅಸಭ್ಯ ಭಾಷೆಯಲ್ಲಿ ಮಾತಾಡುತ್ತಿರಲಿಲ್ಲ. ಆದರೆ ಕೋಮುವಾದಿ ಸ್ವಾಮಿಯೊಬ್ಬ ಇವರ ಆಶ್ರಮದಲ್ಲೇ ತಯಾರಾಗಿ ಬಂದರು. ನೇರವಾಗಿ ಕೋಮುವಾದಿಗಳೊಂದಿಗೆ ಈ ಸ್ವಾಮಿ ಬಸವ ಪರ ಲಿಂಗಾಯತ ಮಠಾಧೀಶರನ್ನು ‘ಸೂ ಮಕ್ಕಳು’ ಎಂದು ಬಹಿರಂಗವಾಗಿ ಬೈದರು, ನಂತರವೂ ತಾನು ಆಡಿದ ಮಾತು ಬಿಜಾಪುರದ ಆಡು ಭಾಷೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಧಾರ್ಮಿಕ ಕ್ಷೇತ್ರದ ಇಂದಿನ ಸ್ಥಿತಿ.

ಯಾವುದೇ ವಿಷಯದ ಬಗ್ಗೆ ಒಂದೇ ಅಭಿಪ್ರಾಯ ಇರಬೇಕೆಂದು ಹೇಳುವುದು ಸರಿಯಲ್ಲ. ಅವರವರು ಬೆಳೆದು ಬಂದ ವಾತಾವರಣ, ಅನುಭವ, ಅಧ್ಯಯನ ಮುಂತಾದವುಗಳ ಹಿನ್ನೆಲೆಯಲ್ಲಿ ತಮಗೆ ಗ್ರಹಿಸಿದ್ದನ್ನು, ಅನಿಸಿದ್ದನ್ನು ಪ್ರತಿಪಾದಿಸುವುದು ತಪ್ಪಲ್ಲ. ಅದು ನಮಗೆ ಇಷ್ಟವಾಗದಿದ್ದರೆ ಸಂಬಂಧಪಟ್ಟ ವಿಷಯಗಳಿಗೆ ಸೀಮಿತವಾಗಿ ಉತ್ತರ ನೀಡಬಹುದು. ಆದರೆ ಬರೆದವರ ವ್ಯಕ್ತಿಗತ ನಿಂದನೆ, ಅವಹೇಳನ ಮಾಡುವುದು ಸರಿಯಲ್ಲ. ಹೀಗೆ ವೈಯಕ್ತಿಕ ನಿಂದನೆ, ತೇಜೋವಧೆಗೆ ಇಳಿಯುವವರನ್ನು ಈಗ ವಾಟ್ ಆ್ಯಪ್ ಯುನಿವರ್ಸಿಟಿಯಿಂದ ಬಂದವರು ಎಂದು ಗುರುತಿಸಲಾಗುತ್ತದೆ. ಇಂಥ ಸೈದ್ಧಾಂತಿಕ ಹಿನ್ನೆಲೆಯ ಕರಾಳ ಶಕ್ತಿಗಳಿಂದ, ವ್ಯಕ್ತಿಗಳಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ. ಈ ಅಪಾಯದಿಂದ ಪ್ರಜಾಪ್ರಭುತ್ವವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News