ಗುಜರಾತ್: ತೂಗು ಸೇತುವೆ ಕುಸಿತದಲ್ಲಿ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡ ಬಿಜೆಪಿ ಸಂಸದ

Update: 2022-10-31 06:47 GMT

ಅಹಮದಾಬಾದ್: ಗುಜರಾತ್‌ನ ಮೊರ್ಬಿ ತೂಗು ಸೇತುವೆ ಕುಸಿತಗೊಂಡ ಘಟನೆಯಲ್ಲಿ ರಾಜ್‌ಕೋಟ್‌ನ ಬಿಜೆಪಿ(BJP) ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ (Mohanbhai Kalyanji Kundariya) ಅವರ ಕುಟುಂಬದ ಹನ್ನೆರಡು ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

 "ನಾನು ಈ ದುರ್ಘಟನೆಯಲ್ಲಿ ಐದು ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ’’ ಎಂದು ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಹೇಳಿದ್ದಾರೆ.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ  ಸ್ಥಳೀಯ ಆಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಅಪಘಾತದಲ್ಲಿ ಬದುಕುಳಿದ ಎಲ್ಲರನ್ನು ರಕ್ಷಿಸಲಾಗಿದೆ ಮತ್ತು ಮಚ್ಚು ನದಿಯಲ್ಲಿದ್ದವರ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ರಕ್ಷಣಾ ದೋಣಿಗಳು ಸಹ ಸ್ಥಳದಲ್ಲಿವೆ ಎಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.

ಗುಜರಾತ್‌ನ ಮೊರ್ಬಿ ನಗರದಲ್ಲಿ ಶತಮಾನಗಳಷ್ಟು ಹಳೆಯದಾದ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಕುಸಿದು 132 ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಎನ್‌ಡಿಆರ್‌ಎಫ್, ಸೇನೆ, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತದ ಐದು ತಂಡಗಳು ಸಮರೋಪಾದಿಯಲ್ಲಿ  ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.

Similar News