ಒಪ್ಪಂದದ ನಿಯಮ ಧಿಕ್ಕರಿಸಿ, ನಿಗದಿತ ಸಮಯಕ್ಕಿಂತ ಮೊದಲೇ ಮೊರ್ಬಿ ತೂಗುಸೇತುವೆ ಬಳಕೆಗೆ ಮುಕ್ತಗೊಳಿಸಿದ್ದ ಖಾಸಗಿ ಸಂಸ್ಥೆ

ವರದಿ

Update: 2022-10-31 08:16 GMT

ಅಹಮದಾಬಾದ್: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ರವಿವಾರ ಸಂಜೆ ಕುಸಿದು ಕನಿಷ್ಠ 132 ಜನರು ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೇತುವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಲಾಗಿದ್ದು, ತಿಂಗಳಾನುಗಟ್ಟಲೆ ಖಾಸಗಿ ಸಂಸ್ಥೆಯೊಂದು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಪಾಲಿಕೆಯ ‘ಫಿಟ್ನೆಸ್ ಪ್ರಮಾಣಪತ್ರ’ ಸಿಕ್ಕಿರಲಿಲ್ಲ ಎಂದು ವರದಿಯಾಗಿದೆ.

15 ವರ್ಷಗಳ ಕಾಲ ಸೇತುವೆ ನಿರ್ವಹಣೆಗಾಗಿ ಅಜಂತಾ ಒರೆವಾ ಕಂಪನಿಗೆ ನೀಡಲಾಗಿದೆ. ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ  ಅಜಂತಾ ಒರೆವಾ ಕಂಪನಿ ನಡುವೆ ಮಾರ್ಚ್ 2022 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು , ಇದು 2037 ರವರೆಗೆ ಮಾನ್ಯವಾಗಿದೆ.

ನಿರ್ವಹಣಾ ಕಾರ್ಯಕ್ಕಾಗಿ ಕಂಪನಿಯು 8 ರಿಂದ 12 ತಿಂಗಳುಗಳನ್ನು ನೀಡಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಕಂಪನಿಯು ಒಪ್ಪಂದದ ನಿಯಮಗಳನ್ನು ಧಿಕ್ಕರಿಸಿ ಕೇವಲ ಐದು ತಿಂಗಳಲ್ಲಿ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ ಎಂದು ವರದಿ ಆಗಿದೆ.

ಕಲೆಕ್ಟರ್, ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಜಂತಾ ಒರೆವಾ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ 2020 ರ ಜನವರಿಯಲ್ಲಿ ಒಪ್ಪಂದದ ನಿಯಮಗಳನ್ನು ನಿರ್ಧರಿಸಲಾಯಿತು. ಪ್ರತಿ ವರ್ಷ ಟಿಕೆಟ್ ದರವನ್ನು 2 ರೂ.ಗಳಷ್ಟು ಹೆಚ್ಚಿಸಲಾಗುವುದು ಎಂದು ನಿರ್ಧರಿಸಲಾಯಿತು.

ಮೊರ್ಬಿ ನಗರದಲ್ಲಿ ಶತಮಾನಕ್ಕೂ ಹೆಚ್ಚು ಹಳೆಯದಾದ ಸೇತುವೆಯು ಜನರಿಂದ ಕಿಕ್ಕಿರಿದು ತುಂಬಿದ್ದಾಗ ಸಂಜೆ 6.30 ರ ಸುಮಾರಿಗೆ ಕುಸಿದುಬಿದ್ದಿದೆ.

Similar News