ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭದ್ರತೆ ವಿಚಾರ: ಕೇಂದ್ರಕ್ಕೆ ಹೈಕೋರ್ಟ್ ತರಾಟೆ

Update: 2022-10-31 09:13 GMT

ಹೊಸದಿಲ್ಲಿ: ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು  ಸಾಮಾನ್ಯ ನಾಗರಿಕರು ಮಾತ್ರವಲ್ಲ, ಬದಲು ಸರಕಾರದಿಂದ ಝೆಡ್ ಕೆಟಗರಿ ಭದ್ರತೆ ಪಡೆದವರಾಗಿದ್ದಾರೆ ಎಂದು ದಿಲ್ಲಿ ಹೈಕೋರ್ಟ್ ಇಂದು ಹೇಳಿದೆಯಲ್ಲದೆ ಸ್ವಾಮಿ ಅವರ ಖಾಸಗಿ ನಿವಾಸದಲ್ಲಿ ಅವರಿಗೆ ಝೆಡ್ ಕೆಟಗರಿ ಭದ್ರತೆ ಒದಗಿಸುವ ಏರ್ಪಾಟನ್ನು ಸರಕಾರ ಹೇಗೆ ಮಾಡಲಿದೆ ಎಂದು ಪ್ರಶ್ನಿಸಿದೆ.

ಸ್ವಾಮಿ ಅವರ ಖಾಸಗಿ ನಿವಾಸದಲ್ಲಿ ಅವರಿಗೆ ಸೂಕ್ತ ಭದ್ರತೆ ಏರ್ಪಾಟು ಮಾಡಲು ಸಾಧ್ಯವಾಗಿಲ್ಲ, ಏಕೆಂದರೆ ದೇಶಾದ್ಯಂತ ಹಬ್ಬದ ಋತುವಿನಲ್ಲಿ ಭದ್ರತೆ ಒದಗಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂಬ ಕೇಂದ್ರದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

"ಇಂತಹ ಸಾಮಾನ್ಯ ಹೇಳಿಕೆಗಳನ್ನು ಅದು ಕೂಡ ಇಷ್ಟು ಬೆಳಿಗ್ಗೆ ನೀಡಬೇಡಿ. ಅವರ ಭದ್ರತೆ ವಾಪಸ್ ಪಡೆದು ಸಿಬ್ಬಂದಿಯನ್ನು ಹಬ್ಬದ ಸಂದರ್ಭ ಭದ್ರತೆ ಉದ್ದೇಶಗಳಿಗೆ ನಿಯೋಜಿಸಿದಿರಾ?" ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಸ್ವಾಮಿ ಅವರ ಭದ್ರತೆಗೆ ಅವರ ಖಾಸಗಿ ನಿವಾಸದಲ್ಲಿ ಹೇಗೆ ವ್ಯವಸ್ಥೆ ಮಾಡಲಾಗುವುದು ಎಂಬ ಕುರಿತು ಉತ್ತರ ನೀಡಲು ಜಸ್ಟಿಸ್ ಯಶವಂತ್ ಶರ್ಮ ಕೇಂದ್ರ ಸರಕಾರಕ್ಕೆ ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ. ಮುಂದಿನ ವಿಚಾರಣೆ ನವೆಂಬರ್ 3 ರಂದು ನಡೆಯಲಿದೆ.

ಝೆಡ್ ಕೆಟಗರಿ ಭದ್ರತೆ ಪಡೆಯುತ್ತಿರುವ ಸ್ವಾಮಿ ಅವರಿಗೆ ಕೇಂದ್ರ ಸರಕಾರ ಸರಕಾರಿ ಬಂಗಲೆಯನ್ನು ದಿಲ್ಲಿಯಲ್ಲಿ ಐದು ವರ್ಷಗಳ ಅವಧಿಗೆ ಜನವರಿ 2016 ರಲ್ಲಿ ಒದಗಿಸಿತ್ತು. ಸ್ವಾಮಿ ಅವರ ರಾಜ್ಯಸಭಾ ಸದಸ್ಯತ್ವ ಎಪ್ರಿಲ್ 2022 ರಲ್ಲಿ ಕೊನೆಗೊಂಡ ನಂತರ ಅವರು ತಮ್ಮ ಬಂಗಲೆ ತೆರವುಗೊಳಿಸಬೇಕಿತ್ತು. ಆದರೆ ಸ್ವಾಮಿ ಅವರು ಹೈಕೋರ್ಟ್ ಕದ ತಟ್ಟಿ ತಮ್ಮ ಭದ್ರತೆಯ ದೃಷ್ಟಿಯಿಂದ ಅದೇ ಬಂಗಲೆ ತಮಗೆ ಮರು ಮಂಜೂರುಗೊಳಿಸಬೇಕು, ಖಾಸಗಿ ನಿವಾಸದಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಯಾವುದೇ ಸೌಕರ್ಯ ಒದಗಿಸಲು ಸ್ಥಳಾವಕಾಶವಿಲ್ಲ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರಕಾರ ಅವರ ಭದ್ರತೆಯನ್ನು ಕಡಿಮೆಗೊಳಿಸಿಲ್ಲವಾದರೂ ಅವರ ಸದಸ್ಯತ್ವ ಅವಧಿ ಮುಗಿದ ನಂತರ ಭದ್ರತೆಯ ಜೊತೆಗೆ ವಸತಿ ಸೌಕರ್ಯವೊದಗಿಸಬೇಕೆಂಬ ಕಟ್ಟುಪಾಡು ತನಗಿಲ್ಲ ಎಂದು ವಾದಿಸಿತ್ತು.

Similar News