ತಲಾ 1 ಕೋಟಿ ರೂ. ಮೌಲ್ಯದ 10,000 ಇಲೆಕ್ಟೋರಲ್ ಬಾಂಡ್ ಇತ್ತೀಚೆಗೆ ಮುದ್ರಿಸಿದ ಸರಕಾರ: RTI ಮಾಹಿತಿ

Update: 2022-10-31 15:13 GMT

ಹೊಸದಿಲ್ಲಿ: ಈ ವರ್ಷದ ಆಗಸ್ಟ್ 1 ಹಾಗೂ ಅಕ್ಟೋಬರ್ 29ರ ನಡುವೆ ಕೇಂದ್ರ ಸರಕಾರ ತಲಾ ರೂ 1 ಕೋಟಿ ಮೌಲ್ಯದ 10,000 ಇಲೆಕ್ಟೋರಲ್ ಬಾಂಡ್‍ಗಳನ್ನು ಮುದ್ರಿಸಿದೆ ಎಂದು ಎರಡು RTI ಅರ್ಜಿಗಳಿಗೆ ನೀಡಲಾದ ಉತ್ತರಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.

ಸರಕಾರ ಮುದ್ರಿಸಿದ ತೀರಾ ಇತ್ತೀಚಿನ ಬಾಂಡ್‍ಗಳು ಅಕ್ಟೋಬರ್ 1 ರಿಂದ 10 ರ ನಡುವೆ  ಮಾರಾಟಕ್ಕಿಡಲಾಗಿದೆ. ಹಿಮಾಚಲ ಮತ್ತು ಗುಜರಾತ್ ಚುನಾವಣೆಗಳಿಗೆ ಮುನ್ನ ಈ ಬೆಳವಣಿಗೆ ನಡೆದಿದೆ.

ಈ ಹಿಂದೆ ಸರಕಾರ 2019 ರಲ್ಲಿ ರೂ. 11,400 ಕೋಟಿ ಮೌಲ್ಯದ ಇಲೆಕ್ಟೋರಲ್ ಬಾಂಡ್‍ಗಳನ್ನು ನಾಶಿಕ್‍ನಲ್ಲಿರುವ ಇಂಡಿಯಾ ಸೆಕ್ಯುರಿಟಿ ಪ್ರೆಸ್‍ನಲ್ಲಿ ಮುದ್ರಿಸಿತ್ತು ಎಂದು ಆರ್‍ಟಿಐ ಕಾರ್ಯಕರ್ತ ಕನ್ಹಯ್ಯಾ ಕುಮಾರ್ ಅವರಿಗೆ ಅಕ್ಟೋಬರ್ 29 ರಂದು ನೀಡಿದ ಉತ್ತರದಲ್ಲಿ ಎಸ್‍ಬಿಐ ಹೇಳಿದೆ.

ತಮಗೆ ದೊರೆತ ಆರ್‍ಟಿಐ ಉತ್ತರ ಕುರಿತು ಪ್ರತಿಕ್ರಿಯಿಸಿದ ಕುಮಾರ್,  ಜುಲೈ ತಿಂಗಳಲ್ಲಿ ಮಾರಾಟಕ್ಕಿಡಲಾದ ರೂ. 1 ಕೋಟಿ ಮೌಲ್ಯದ 5,068 ಬಾಂಡ್‍ಗಳು ಮಾರಾಟವಾಗದೇ ಉಳಿದಿದ್ದರೂ ಸರಕಾರ ಮತ್ತೆ ಬಾಂಡ್‍ಗಳನ್ನು ಮುದ್ರಿಸಿದೆ. 2018ರ ಆರಂಭದಿಂದ ಸರಕಾರ  ರೂ  1 ಕೋಟಿ ಮೌಲ್ಯದ 24,650 ಬಾಂಡ್‍ಗಳನ್ನು ಮುದ್ರಿಸಿ ಅವುಗಳಲ್ಲಿ 10,108 ಬಾಂಡ್‍ಗಳನ್ನು ಮಾರಾಟ ಮಾಡಿದೆ ಎಂದು ದೊರೆತ ಮಾಹಿತಿಯಿಂದ ತಿಳಿದು ಬರುತ್ತದೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 19 ರಲ್ಲಿ ನಿವೃತ್ತ ಕೊಮ್ಮೊಡೋರ್ ಲೋಕೇಶ್ ಬಾತ್ರ ಎಂಬವರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ ದೊರೆತ ಉತ್ತರದಲ್ಲಿ ಸರಕಾರ ಇಲೆಕ್ಟೋರಲ್ ಬಾಂಡ್‍ಗಳ ಮುದ್ರಣಕ್ಕೆ ಇಲ್ಲಿಯ ತನಕ ರೂ 1.85 ಕೋಟಿ ವ್ಯಯಿಸಿದೆ ಎಂಬ ಮಾಹಿತಿ ದೊರಕಿದೆ.

Similar News