ಗುಜರಾತ್‌ ಸೇತುವೆ ದುರಂತ: ನಿರ್ವಹಣಾ ಕಂಪೆನಿಯ ಮೆನೇಜರ್‌ ಸೇರಿದಂತೆ 9 ಮಂದಿ ಬಂಧನ

Update: 2022-10-31 16:20 GMT

ಅಹಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ಒಂದು ದಿನದ ನಂತರ, ಒಂಬತ್ತು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಸೇತುವೆಯನ್ನು ನವೀಕರಿಸಿದ ಒರೆವಾ ಕಂಪನಿಯ ಮೆನೇಜರ್, ಟಿಕೆಟ್ ಕಲೆಕ್ಟರ್‌ಗಳು, ಸೇತುವೆ ದುರಸ್ತಿ ಗುತ್ತಿಗೆದಾರರು ಮತ್ತು ಜನಸಂದಣಿಯನ್ನು ನಿಯಂತ್ರಿಸಬೇಕಿದ್ದ ಮೂವರು ಭದ್ರತಾ ಸಿಬ್ಬಂದಿಗಳು ಸೇರಿದ್ದಾರೆ.
ಗುಜರಾತ್ ಮೂಲದ ಒರೆವಾ ಕಂಪೆನಿ ಹಲವು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಅದಾಗ್ಯೂ ಸಂಸ್ಥೆಯ ಯಾವೊಬ್ಬ ಉನ್ನತ ಮುಖ್ಯಸ್ಥರನ್ನು ಬಂಧಿಸಿಲ್ಲ ಎಂದು ndtv.com ವರದಿ ಮಾಡಿದೆ. 

"ನಾವು ತಪ್ಪಿತಸ್ಥರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ, ನಾವು ಯಾರನ್ನೂ ಬಿಡುವುದಿಲ್ಲ" ಎಂದು ಮೊರ್ಬಿ ಪೊಲೀಸ್ ಮುಖ್ಯಸ್ಥ ಅಶೋಕ್ ಯಾದವ್ ಇಂದು ಹೇಳಿದ್ದಾರೆ.

ಮೊರ್ಬಿ ಸ್ಥಳೀಯ ಆಡಳಿತ ಸಂಸ್ಥೆಯೊಂದಿಗೆ 15 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಒರೆವಾ ಸಂಸ್ಥೆಯು "ಸೇತುವೆ ನವೀಕರಣದ ತಾಂತ್ರಿಕ ಅಂಶವನ್ನು ದೇವಪ್ರಕಾಶ್ ಸೊಲ್ಯೂಷನ್ಸ್‌ ಎಂಬ ಸಣ್ಣ ಕಂಪನಿಯೊಂದಕ್ಕೆ ಹೊರಗುತ್ತಿಗೆ ನೀಡಿದೆ. 

ಮಾರ್ಚ್‌ನಲ್ಲಿ ಐತಿಹಾಸಿಕ ಬ್ರಿಟಿಷ್ ಯುಗದ ಸೇತುವೆಯ ದುರಸ್ತಿ ಕಾರ್ಯಕ್ಕಾಗಿ ಓರೆವಾ ಸಂಸ್ಥೆಯನ್ನು ನೇಮಿಸಲಾಗಿತ್ತು. ದುರಸ್ತಿ ಬಳಿಕ ಏಳು ತಿಂಗಳ ನಂತರ ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷವನ್ನು ಆಚರಣೆ ವೇಳೆ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ನಿರ್ವಹಣೆ ಮತ್ತು ದುರಸ್ತಿಗಾಗಿ ಸೇತುವೆಯನ್ನು ಕನಿಷ್ಠ ಎಂಟರಿಂದ 12 ತಿಂಗಳವರೆಗೆ ಮುಚ್ಚಲು ಕಂಪನಿಯು ಒಪ್ಪಂದಕ್ಕೆ ಬಂದಿತ್ತು. ಅದಾಗ್ಯೂ, ಕಳೆದ ವಾರ ಸೇತುವೆಯನ್ನು ತೆರೆದಿರುವುದು "ಗಂಭೀರ ಬೇಜವಾಬ್ದಾರಿ ಮತ್ತು ಅಸಡ್ಡೆ ಸೂಚಕ" ಎಂದು ಪೊಲೀಸರು ಯಾರನ್ನೂ ಹೆಸರಿಸದ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ನಿರ್ವಹಣೆಯನ್ನು ನಿಯೋಜಿಸಿದವರು "ದುರಸ್ತಿ/ನಿರ್ವಹಣೆ ಕೆಲಸವನ್ನು ಸೂಕ್ತವಾಗಿ ಮಾಡಿಲ್ಲ" ಎಂದು ಎಫ್ಐಆರ್ ಹೇಳಿದೆ. ಅವರು "ಸರಿಯಾದ ಗುಣಮಟ್ಟದ ಪರಿಶೀಲನೆಯನ್ನು ನಡೆಸಲಿಲ್ಲ, ಆದರೆ ಸಂಭವನೀಯ ಮಾರಣಾಂತಿಕ ಅಪಾಯಗಳ ಬಗ್ಗೆ ತಿಳಿದಿದ್ದರು” ಎಂದು ಎಫ್‌ಐಆರ್‌ ಹೇಳಿದೆ. 

ನಿನ್ನೆ ಸುಮಾರು 500 ಜನರಿಗೆ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇದರಿಂದಾಗಿ ತೂಗು ಸೇತುವೆ ಮೇಲೆ ಜನಸಂದಣಿಯು ಹೆಚ್ಚಾಗಿದೆ. ಸೇತುವೆಯು ಕೇವಲ 125 ಜನರ ತೂಕವನ್ನು ಹೊರಲು ಮಾತ್ರ ಸಾಮರ್ಥ್ಯ ಹೊಂದಿತ್ತು ಎಂದು ವರದಿಯಾಗಿದೆ.

ಒಪ್ಪಂದದ ಪ್ರಕಾರ 2037 ರವರೆಗೆ ಪ್ರತಿ ವರ್ಷ ಟಿಕೆಟ್ ದರವನ್ನು ಹೆಚ್ಚಿಸಲು ಕಂಪನಿಗೆ ಅವಕಾಶ ಇತ್ತು.

Similar News