ಅತ್ಯಾಚಾರ ಸಂತ್ರಸ್ತೆಯರಿಗೆ ಎರಡು ಬೆರಳುಗಳ ಪರೀಕ್ಷೆ ನಡೆಸಿದರೆ ದುರ್ನಡತೆಯ ಅಪರಾಧವಾಗಿ ಪರಿಗಣನೆ:ಸುಪ್ರೀಂ ಎಚ್ಚರಿಕೆ
ಹೊಸದಿಲ್ಲಿ,ಅ.31: ತನ್ನ ಮೇಲೆ ಅತ್ಯಾಚಾರ(rape) ನಡೆದಿದೆ ಎಂದು ಹೇಳಿಕೊಂಡ ಮಹಿಳೆಯ ಮೇಲೆ ನಿಷೇಧಿತ ಎರಡು ಬೆರಳುಗಳ ಪರೀಕ್ಷೆ ನಡೆಸುವ ಯಾವುದೇ ವ್ಯಕ್ತಿಯನ್ನು ದುರ್ನಡತೆಯ ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ(Supreme Court)ವು ಸೋಮವಾರ ಎಚ್ಚರಿಕೆ ನೀಡಿದೆ.
ಇಂದಿಗೂ ಇಂತಹ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ವಿಚಾರಣೆ ಸಂದರ್ಭದಲ್ಲಿ ಹೇಳಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ (DY Chandrachud)ಮತ್ತು ಹಿಮಾ ಕೊಹ್ಲಿ (Hima Kohli)ಅವರ ಪೀಠವು,ಈ ನ್ಯಾಯಾಲಯವು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆಪಾದಿತ ಪ್ರಕರಣಗಳಲ್ಲಿ ಎರಡು ಬೆರಳುಗಳ ಪರೀಕ್ಷೆಯ ಬಳಕೆಯನ್ನು ಪದೇ ಪದೇ ನಿರಾಕರಿಸಿದೆ. ಈ ತಥಾಕಥಿತ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಬದಲಿಗೆ ಈ ಪರೀಕ್ಷೆಯು ಸಂತ್ರಸ್ತೆಯರನ್ನು ಮತ್ತೆ ಬಲಿಪಶುಗಳನ್ನಾಗಿಸುತ್ತದೆ ಮತ್ತು ಅವರಿಗೆ ಮತ್ತೆ ಆಘಾತವನ್ನುಂಟು ಮಾಡುತ್ತದೆ. ಎರಡು ಬೆರಳಿನ ಪರೀಕ್ಷೆಯನ್ನು ನಡೆಸಲೇಬಾರದು ಎಂದು ತಾಕೀತು ಮಾಡಿತು.
ಎರಡು ಬೆರಳುಗಳ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎನ್ನುವುದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶಿಸಿದ ಪೀಠವು,ಎಲ್ಲ ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಪಠ್ಯಕ್ರಮಗಳನ್ನು ಪುನರ್ಪರಿಶೀಲಿಸುವಂತೆ ಮತ್ತು ಎರಡು ಬೆರಳುಗಳ ಪರೀಕ್ಷೆಗೆ ಸಂಬಂಧಿಸಿದ ಅಧ್ಯಯನ ವಿಷಯವನ್ನು ತೆಗೆದುಹಾಕುವಂತೆ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಸೂಚಿಸಿತು.
ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ಪರೀಕ್ಷೆಗಾಗಿ ಸೂಕ್ತ ಕಾರ್ಯವಿಧಾನವನ್ನು ತಿಳಿಸಲು ವೈದ್ಯಕೀಯ ವೃತ್ತಿಪರರಿಗಾಗಿ ಕಾರ್ಯಾಗಾರಗಳನ್ನು ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೂ ಸರ್ವೋಚ್ಚ ನ್ಯಾಯಾಲಯವು ನಿರ್ದೇಶಿಸಿತು.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
ಎರಡು ಬೆರಳುಗಳ ಪರೀಕ್ಷೆಯು ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯು ಅತ್ಯಾಚಾರಕ್ಕೊಳಗಾಗಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಆಧರಿಸಿದೆ. ಮಹಿಳೆ ಲೈಂಗಿಕವಾಗಿ ಸಕ್ರಿಯಳಾಗಿದ್ದಾಳೆ ಎಂಬ ಮಾತ್ರಕ್ಕೆ ಆಕೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದಾಗಿ ಆಕೆಯನ್ನು ನಂಬಲು ಸಾಧ್ಯವಿಲ್ಲ ಎನ್ನುವುದು ಪುರುಷ ಪ್ರಧಾನ ಮತ್ತು ಸ್ತ್ರೀದ್ವೇಷಿ ಧೋರಣೆಯಾಗುತ್ತದೆ.