ನ.4ರಿಂದ 6ರವರೆಗೆ ಉಡುಪಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಟೂರ್ನಿ
ಉಡುಪಿ: ಕೊಡವೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಸ್ ವತಿಯಿಂದ ಇದೇ ನ.4ರಿಂದ 6ರವರೆಗೆ ‘ಬಿಕೆಐ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್-2022’ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕ ಹಾಗೂ ಕಾರ್ಯದರ್ಶಿ ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸುಮಾರು 24 ರಾಜ್ಯಗಳಿಂದ ಆಗಮಿಸುವ 2,500ಕ್ಕೂ ಅಧಿಕ ವಿವಿಧ ವಯೋಮಾನದ ಕರಾಟೆ ಸ್ಪರ್ಧಿಗಳೊಂದಿಗೆ ರಾಷ್ಟ್ರೀಯ ಮಟ್ಟದ 200ಕ್ಕೂ ಅಧಿಕ ರೆಫರಿಗಳು ಸಹ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಬುಡೋಕಾನ್ ಕರಾಟೆ ಡೋ ಇಂಟರ್‌ನ್ಯಾಶನಲ್, ವಿಶ್ವದ ಪ್ರಧಾನ ಕರಾಟೆ ಶೈಲಿಗಳಲ್ಲಿ ಒಂದಾಗಿದ್ದು, ಮಲೇಶ್ಯಾದಲ್ಲಿ ಗ್ರ್ಯಾಂಡ್‌ಮಾಸ್ಟರ್ ಚ್ಯೂ ಚೂ ಸೂಟ್ ಇವರಿಂದ ಸ್ಥಾಪಿಸಲ್ಪಟ್ಟಿದೆ. ಈ ಶೈಲಿ ಭಾರತದಲ್ಲಿ ಲಕ್ಷಾಂತರ ಸದಸ್ಯರನ್ನು ಹೊಂದಿದ್ದು, 1980ರಲ್ಲಿ ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಸ್ಪರ್ಧಾಕೂಟ ನಡೆದಿದೆ. ಅನಂತರ ಪ್ರತಿ ವರ್ಷ ದೇಶದ ವಿವಿಧ ಭಾಗಗಳಲ್ಲಿ ಈ ಸ್ಪರ್ಧಾಕೂಟ ನಡೆಯುತ್ತಾ ಬಂದಿದೆ ಎಂದರು.
ಈ ಬಾರಿ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನ 40ನೇ ಅಧ್ಯಾಯ ಕೊಡವೂರು ಶಾಖೆಯ ಆತಿಥೇಯದಲ್ಲಿ, ಶಾಖೆಯ ಶಿಕ್ಷಕ ಕೃಷ್ಣ ಜಿ. ಕೋಟ್ಯಾನ್ ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಸ್ಪರ್ಧಾಕೂಟವು ನವಂಬರ್ 4, 5 ಹಾಗೂ 6ರಂದು ಉಡುಪಿಯ ಅವೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರವೀಣ್‌ಕುಮಾರ್ ತಿಳಿಸಿದರು.
ಸ್ಪರ್ಧಾಕೂಟದಲ್ಲಿ ವೈಯಕ್ತಿಕ ಕಟಾ, ವೈಯಕ್ತಿಕ ಕುಮಿಟೆ , ತಂಡ ಕಟಾ ಅಲ್ಲದೆ ಈ ಬಾರಿ ಹೊಸ ರೀತಿಯ ತಂಡ ಕುಮಿಟೆ ಸ್ಪರ್ಧೆಯನ್ನೂ ಸೇರಿಸಲಾಗಿದೆ. ಸ್ಪರ್ಧಿಗಳ ಬೆಲ್ಟ್, ವಯಸ್ಸು ಹಾಗೂ ದೇಹ ತೂಕದ ಆಧಾರದಲ್ಲಿ ವಿವಿಧ ವಿಭಾಗಗಳಿದ್ದು, ಸುಮಾರು 250 ಉಪ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 12ವರ್ಷದೊಳಗಿನವರನ್ನು ಸಬ್ ಜೂನಿಯರ್, 12ರಿಂದ 18ವರ್ಷ ವಯೋಮಿತಿಯವರನ್ನು ಜೂನಿಯರ್ ಹಾಗೂ 18 ವರ್ಷದ ಮೇಲಿನವರನ್ನು ಸೀನಿಯರ್ ವಿಭಾಗಗಳಾಗಿ ವಿಂಗಡಿಸಲಾಗುವುದು ಎಂದರು.
ಬುಡೋಕಾನ್ ಕರಾಟೆ ಡೋ ಇಂಟರ್‌ನ್ಯಾಶನಲ್ ಇದರ ಅಧ್ಯಕ್ಷ ಸಿ. ಹನುಮಂತ ರಾವ್ ಇವರ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಕಾರ್ಯದರ್ಶಿ ಪ್ರವೀಣ್‌ಕುಮಾರ್ ತಾಂತ್ರಿಕ ಸಲಹೆ ನೀಡಲಿದ್ದಾರೆ.
ಸ್ಪರ್ಧಾಕೂಟವನ್ನು ನ.4ರ ಅಪರಾಹ್ನ 2:30ಕ್ಕೆ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದು, ಶಾಸಕ ರಘುಪತಿ ಭಟ್ ಗ್ರ್ಯಾಂಡ್ ಮಾಸ್ಟರ್ ಪುತ್ತಳಿಯನ್ನು ಅನಾವರಣಗೊಳಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಮಾರೋಪ ಸಮಾರಂಭ ನ.6ರಂದು ಸಂಜೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಶಿವಪ್ಪ ಟಿ.ಕಾಂಚನ್, ಶಿಕ್ಷಕ ಕೃಷ್ಣ ಜಿ.ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಕಿರಣ್ ಕುಂದರ್, ಸಲಹೆಗಾರ ಆನಂದ ದೇವಾಡಿಗ ಮಣಿಪಾಲ ಉಪಸ್ಥಿತರಿದ್ದರು.