ಉಡುಪಿ: ​ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜನಜಾಗೃತಿ ಅಭಿಯಾನ

Update: 2022-10-31 17:05 GMT

ಉಡುಪಿ: ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಪಡಿ ಮಂಗಳೂರು, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚೈಲ್ಡ್‌ಲೈನ್-1098 ಉಡುಪಿ ಜಿಲ್ಲೆ ಇವುಗಳ ಸಹ ಭಾಗಿತ್ವದಲ್ಲಿ ಓಯಶಿಸ್ ಇಂಡಿಯಾ ಮುಂಬೈ ವತಿಯಿಂದ ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜನಜಾಗೃತಿ ಅಭಿಯಾನ ಮುಕ್ತಿ ಬೈಕ್ ಚಾಲೆಂಜ್ ಕಾರ್ಯಕ್ರಮವನ್ನು ಸೋಮವಾರ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣ ದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶರ್ಮಿಳಾ ಎಸ್. ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾನವ ಕಳ್ಳ ಸಾಗಣಿಕೆ ಜಾಲದ ವ್ಯಾಪ್ತಿ ಹೆಚ್ಚುತ್ತಿರುವುದು ಆತಂಕಕಾರಿ. ದುರ್ಬಲರು, ವಲಸೆ ಕಾರ್ಮಿಕರು, ತಮ್ಮನ್ನು ತಾವು ಕಾಪಾಡಿಕೊಳ್ಳಲು ಆಗದೇ ಇರುವವರು, ಮಕ್ಕಳು, ಮಹಿಳೆಯರು ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.

ಹುಟ್ಟಿನಿಂದ ಸಾಯುವವರೆಗೆ ಎಲ್ಲರಿಗೂ ಕಾನೂನು ಅನ್ವಯವಾಗುತ್ತದೆ. ಆದುದರಿಂದ ಪ್ರತಿಯೊಬ್ಬರು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಮಕ್ಕಳಿಗೆ ಕಾನೂನು ಚೌಕಟ್ಟಿನೊಳಗೆ ವ್ಯವಹಾರ ಮಾಡುವ ಬಗ್ಗೆ ತಿಳಿಸಬೇಕು. ಇದರಿಂದ ಕಾನೂನು ತಿಳುವಳಿಕೆ ಸುಲಭವಾಗಲಿದೆ ಎಂದು ಅವರು ಹೇಳಿದರು.

ಉಡುಪಿ ಕ್ಷೇತ್ರ ಶಿಕ್ಷಣಾಕಾರಿ ಚಂದ್ರೇಗೌಡ, ಬಾಲನ್ಯಾಯ ಮಂಡಳಿ ಸದಸ್ಯೆ ಅಮೃತಕಲಾ, ಚೈಲ್ಡ್‌ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷ ತಿಲೋತ್ತಮ ನಾಯಕ್, ತಾಲೂಕು ಕೇಂದ್ರದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಜತೆಕಾರ್ಯದರ್ಶಿ ವಾಸು ಆಚಾರ್ಯ, ಮಂಗಳೂರು ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಸುನೀತಾ, ಸದಸ್ಯರಾದ ಕೃಷ್ಣ ಆಚಾರ್ಯ, ಮಂಜುಳಾ, ಬೋರ್ಡ್ ಪ.ಪೂ.ಕಾಲೇಜು ಪ್ರಾಂಶುಪಾಲೆ ಲೀಲಾಬಾಯಿ ಭಟ್, ಮುಖ್ಯೋಪಾಧ್ಯಾಯಿನಿ ಶಾಂತಿ ಪೈ, ಓಯಾಸಿಸ್ ಇಂಡಿಯಾದ ಡೇನಿಯಲ್ ಜಬ್ಬರಾಜ್, ಕ್ರೆಬಸ್ಟ್ ವಿವಿಯ ಆರ್ಮುಗಂ ಉಪಸ್ಥಿತರಿದ್ದರು.

ಈ ಸಂದರ್ಭ ಬೆಂಗಳೂರಿನ ಕ್ರಿಸ್ಟ್ ವಿವಿಯ ವಿದ್ಯಾರ್ಥಿಗಳಿಂದ ಮಾನವ ಕಳ್ಳ ಸಾಗಾಣಿಕೆಯ ವಿರುದ್ದ ಜನ ಜಾಗೃತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಬೀದಿ ನಾಟಕ ಪ್ರದರ್ಶನಗೊಂಡಿತು.

Similar News