ಕೋಟೇಶ್ವರ ಪುಷ್ಕರಣಿ ಕಲುಷಿತ ನೀರಿನ ಕುರಿತ ‘ವಾರ್ತಾಭಾರತಿ’ ವರದಿ ಫಲಶ್ರುತಿ

ಸಿಎಂ ಅಧೀನ ಕಾರ್ಯದರ್ಶಿಯಿಂದ ಸೂಕ್ತ ಕ್ರಮಕ್ಕೆ ಸೂಚನೆ

Update: 2022-10-31 17:45 GMT

ಕುಂದಾಪುರ: ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಗೆ ಕಲುಷಿತ ನೀರು ಸೇರಿ ಕೆರೆಯ ಮೀನುಗಳು ಸತ್ತ ಬಗ್ಗೆ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ(ಆಡಳಿತ)ರವರು ಸಂಬಂಧಪಟ್ಟ ಇಲಾಖೆಗೆ ಸೂಚನೆ ಸೂಕ್ತ ಕ್ರಮವಹಿಸಲು ಸೂಚಿಸಿದ್ದಾರೆ.

ಕೋಟಿತೀರ್ಥ ಪುಷ್ಕರಣಿಗೆ ಮಲಿನ ನೀರು ಸೇರಿ ಮೀನುಗಳು ಸಾವನ್ನಪ್ಪಿದ ಬಗ್ಗೆ ಅ.7ರಂದು ‘ವಾರ್ತಾಭಾರತಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಇದಕ್ಕೆ ಕೋಟೇಶ್ವರ ಗ್ರಾಪಂ ಸಹಿತ, ತಾಪಂ ಹಾಗೂ ಆರೋಗ್ಯ ಇಲಾಖೆ ಕೂಡ ಸ್ಪಂದನೆ ನೀಡಿತ್ತು. ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪುಷ್ಕರಣಿ ಸಮೀಪದ ಮನೆಗಳ ಬಾವಿ ನೀರು ಕೂಡ ಮಲಿನಗೊಂಡು ಉಪಯೋಗಿಸಲಾಗದ ಕುರಿತು ಪತ್ರಿಕೆ ಇನ್ನೊಂದು ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು.

ಈ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ(ಆಡಳಿತ) ಕೋಟೇಶ್ವರ ಕೋಟಿಲಿಂಗೇಶ್ವರ ದೇವಳದ ಪುಷ್ಕರಣಿಯಲ್ಲಿ ಮೀನುಗಳ ಮಾರಣಹೋಮ ಕುರಿತು ಆಧ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಅಗತ್ಯ ಕ್ರಮಕೈಗೊಳ್ಳಲು ಕುಂದಾಪುರ ಮೀನುಗಾರಿಕೆ ಸಾಯಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಈ ಆದೇಶದ ಹಿನ್ನೆಲೆಯಲ್ಲಿ ಕುಂದಾಪುರದ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸುಮಲತಾ ಖುದ್ದು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ ಮೀನುಗಾರಿಕೆ ಮಹಾವಿದ್ಯಾಲಯಕ್ಕೆ ನೀಡಿದ್ದಾರೆ. ಇಲ್ಲಿನ ವರದಿ ಬಂದ ಬಳಿಕ ಸೂಕ್ತ ಸಲಹೆ ನೀಡಲಾಗುವುದು ಹಾಗೂ ಉಡುಪಿಯ ಪರಿಸರ ಇಲಾಖೆಗೆ ನೀರಿನ ನೈರ್ಮಲ್ಯದ ಕುರಿತು ಪರಿಶೀಲಿಸಲು ಕೋರಿದ್ದಾರೆ.

ಕೋಟಿತೀರ್ಥ ಪುಷ್ಕರಣಿಯಲ್ಲಿ ಪ್ರಸ್ತುತ ಮೀನುಗಳು ಸಾಯುತ್ತಿಲ್ಲ. ಆದ್ಯಾಗೆಯೂ ಸತ್ತ ಮೀನುಗಳನ್ನು ಕೆರೆಯಿಂದ ಹೊರತೆಗೆದು ಗುಂಡಿತೋಡಿ ಮುಚ್ಚುವಂತೆ ಹಾಗೇ ಸ್ಥಳೀಯವಾಗಿ ಹೊಸ ನೀರನ್ನು ಬಿಡಲು ಸಲಹೆ ನೀಡಲಾಗಿದೆ ಎಂದು ಸುಮಲತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದ.ಕ. ಜಿಲ್ಲೆ ನೂತನ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ನೇಮಕ

Similar News