ಗಣಿಗಾರಿಕೆ ಪ್ರಕರಣ: ಜಾರ್ಖಂಡ್ ಮುಖ್ಯಮಂತ್ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್

Update: 2022-11-02 16:24 GMT

ಹೊಸದಿಲ್ಲಿ,ನ.2: ಜಾರಿ ನಿರ್ದೇಶನಾಲಯ (ಈ.ಡಿ.)ವು ಜಾರ್ಖಂಡ್ ನಲ್ಲಿಯ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ತನ್ನ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ನ.3ರಂದು ತನ್ನ ಮುಂದೆ ಹಾಜರಾಗುವಂತೆ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್(Hemant Soren) ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

‘ವಿಚಾರಣೆಗಾಗಿ ಗುರುವಾರ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಲಾಗಿದೆ. ನಮ್ಮ ತನಿಖೆಯ ಸಂದರ್ಭ ಸೊರೇನ್ ಸಹಾಯಕ ಪಂಕಜ್ ಮಿಶ್ರಾ (Pankaj Mishra)ವಿರುದ್ಧ ಕೆಲವು ಅಂಶಗಳು ಬೆಳಕಿಗೆ ಬಂದಿದ್ದು,ಅವುಗಳನ್ನು ದೃಢಪಡಿಸಿಕೊಳ್ಳುವ ಅಗತ್ಯವಿದೆ ’ ಎಂದು ಈ.ಡಿ.ಅಧಿಕಾರಿಯೋರ್ವರು ಹೇಳಿದರು. ಮಿಶ್ರಾ ಬಳಿಯಿಂದ ವಶಪಡಿಸಿಕೊಳ್ಳಲಾಗಿರುವ ಸೋರೆನ್ ಸಹಿಯುಳ್ಳ ಕೆಲವು ಚೆಕ್‌ ಗಳ ಕುರಿತೂ ತನಿಖಾ ಸಂಸ್ಥೆಯು ಅವರನ್ನು ಪ್ರಶ್ನಿಸಲಿದೆ ಎಂದು ಈ.ಡಿ.ಯಲ್ಲಿನ ಮೂಲಗಳು ತಿಳಿಸಿವೆ.

ಸೊರೇನ್ ಅವರ ನಿಕಟವರ್ತಿ ಹಾಗೂ ಬರಹೈತ್ ವಿಧಾನಸಭಾ ಕ್ಷೇತ್ರದಲ್ಲಿ ಅವರ ಶಾಸಕ ಪ್ರತಿನಿಧಿಯಾಗಿರುವ ಮಿಶ್ರಾರನ್ನು ಈ ವರ್ಷದ ಜುಲೈನಲ್ಲಿ ಬಂಧಿಸಿದ್ದ ಈ.ಡಿ.ಪ್ರಕರಣದಲ್ಲಿ ಅವರ ಮತ್ತು ಇತರ ಇಬ್ಬರ ವಿರುದ್ಧ ಪ್ರಾಸಿಕ್ಯೂಷನ್ ದೂರು (ದೋಷಾರೋಪ ಪಟ್ಟಿಗೆ ಸಮ) ದಾಖಲಿಸಿತ್ತು.

ಮಿಶ್ರಾ ಬಳಿಯಿಂದ ಇತರ ದಾಖಲೆಗಳೊಂದಿಗೆ ಸೊರೇನ್ ಅವರ ಸಹಿಯುಳ್ಳ ಬ್ಯಾಂಕ್ ಆಫ್ ಇಂಡಿಯಾ (Bank of India)ಖಾತೆಯ ಎರಡು ಚೆಕ್ ಗಳು ಮತ್ತು 31 ಖಾಲಿ ಚೆಕ್ ಗಳನ್ನು ತಾನು ವಶಪಡಿಸಿಕೊಂಡಿದ್ದಾಗಿ ಈ.ಡಿ.ದೂರಿನಲ್ಲಿ ತಿಳಿಸಿತ್ತು. ಕಳೆದ ತಿಂಗಳು ಅನಾರೋಗ್ಯ ಕಾರಣದಿಂದ ಮಿಶ್ರಾರನ್ನು ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿತ್ತು ಮತ್ತು ಆ ಸಂದರ್ಭದಲ್ಲಿ ಅವರು ಅಧಿಕಾರದಲ್ಲಿರುವ ಕೆಲವು ವ್ಯಕ್ತಿಗಳಿಗೆ ದೂರವಾಣಿ ಕರೆಗಳನ್ನು ಮಾಡಿದ್ದರು. ಈ ಬಗ್ಗೆಯೂ ಈ.ಡಿ.ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Similar News