ಕೆಎಸ್ಸಾರ್ಟಿಸಿ ಬಸ್‌ಗೆ ಟ್ರೇಲರ್‌ನಲ್ಲಿ ಸಾಗಿಸಲಾಗುತ್ತಿದ್ದ ವಿಮಾನದ ರೆಕ್ಕೆ ಢಿಕ್ಕಿ; ಹಲವರಿಗೆ ಗಾಯ

Update: 2022-11-03 06:51 GMT

ತಿರುವನಂತಪುರ: ಟ್ರೇಲರ್‌ನಲ್ಲಿ ಸಾಗಿಸುತ್ತಿದ್ದ ವಿಮಾನದ ರೆಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ ಬಲರಾಮಪುರಂ ಜಂಕ್ಷನ್ ಬಳಿ ನಡೆದಿದೆ.

ವರದಿಗಳ ಪ್ರಕಾರ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸೇರಿದಂತೆ ಐದಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ನಂತರ ಹಲವು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟ್ರೈಲರ್ ವೊಂದು  ವಿಮಾನದ ರೆಕ್ಕೆಗಳು ಮತ್ತು ಇತರ ಭಾಗಗಳನ್ನು ಹೈದರಾಬಾದ್‌ಗೆ ತೆಗೆದುಕೊಂಡು ಹೋಗುತ್ತಿತ್ತು. ಅಪಘಾತದಲ್ಲಿ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಬಸ್‌ಗೆ ಅಪ್ಪಳಿಸಿದ ವಿಮಾನವು ಏರ್‌ಬಸ್ A320 ಆಗಿದ್ದು, 30 ವರ್ಷಗಳ ಹಾರಾಟದ ನಂತರ 2018 ರಿಂದ ತಿರುವನಂತಪುರ ವಿಮಾನ ನಿಲ್ದಾಣದ ಹ್ಯಾಂಗರ್ ಘಟಕದ ಬಳಿ ಸಂಗ್ರಹಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅದರ ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ವಿಮಾನವನ್ನು ಬಳಸುತ್ತಿದ್ದರು.

ಇನ್ನು ಮುಂದೆ ಯಾವುದೇ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದು ಖಚಿತವಾದ ಬಳಿಕ ಅಧಿಕಾರಿಗಳು ಇದನ್ನು ಹರಾಜಿಗೆ ಇಟ್ಟಿದ್ದು, ಹೈದರಾಬಾದ್ ನಿವಾಸಿ ಜೋಗಿಂದರ್ ಸಿಂಗ್ ಅವರು 75 ಲಕ್ಷ ರೂಪಾಯಿಗೆ ವಿಮಾನವನ್ನು ಖರೀದಿಸಿದ್ದಾರೆ. ವಿಮಾನದ ಬಿಡಿಭಾಗ ಕಿತ್ತುಹಾಕಲಾಯಿತು ಹಾಗೂ  ನಾಲ್ಕು ಟ್ರೈಲರ್‌ಗಳಲ್ಲಿ ಸಾಗಿಸಲಾಯಿತು.

Similar News