×
Ad

ಅಮೃತಸರ: ಶಿವಸೇನೆ ನಾಯಕ ಸುಧೀರ್ ಸೂರಿ ಗುಂಡಿಕ್ಕಿ ಹತ್ಯೆ

Update: 2022-11-04 16:33 IST

ಹೊಸದಿಲ್ಲಿ: ಪಂಜಾಬ್ ನ ಅಮೃತಸರದಲ್ಲಿ ಶುಕ್ರವಾರ ಶಿವಸೇನೆ ನಾಯಕ ಸುಧೀರ್ ಸೂರಿಯವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು NDTV ವರದಿ ಮಾಡಿದೆ.

ನಗರದ ದೇವಸ್ಥಾನದ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಶಿವಸೇನೆ ಮುಖಂಡರು ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಗುಂಪಿನಿಂದ ಯಾರೋ ಅಪರಿಚಿತನೊಬ್ಬ  ಸೂರಿಯತ್ತ ಗುಂಡು ಹಾರಿಸಿದ್ದಾನೆ.

ಸೂರಿ ಅವರಿಗೆ ಪೊಲೀಸ್ ರಕ್ಷಣೆ ಇತ್ತು.  ಆದರೆ ಪೊಲೀಸರ ಕಣ್ತಪ್ಪಿಸಿದ ದಾಳಿಕೋರ ಪಿಸ್ತೂಲಿನಿಂದ ಕನಿಷ್ಠ ಐದು ಗುಂಡುಗಳನ್ನು ಹಾರಿಸಿದ್ದು, ಗುಂಡೇಟಿಗೆ ಒಳಗಾದ ಸೂರಿ ಅವರನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಸಾವನ್ನಪ್ಪಿದರು ಎಂದು BBC ವರದಿ ಮಾಡಿದೆ.

ದೇವಾಲಯದ ಆವರಣದ ಹೊರಗೆ ಕಸದ ಬುಟ್ಟಿಯಲ್ಲಿ ಕೆಲವು ಒಡೆದ ವಿಗ್ರಹಗಳು ಪತ್ತೆಯಾದ ನಂತರ ಶಿವಸೇನೆ ಮುಖಂಡರು ದೇವಾಲಯದ ಅಧಿಕಾರಿಗಳ ವಿರುದ್ಧ ಧರಣಿ ನಡೆಸುತ್ತಿದ್ದರು.

ಗುಂಡು ಹಾರಿದ ಸ್ಥಳ ಜನವಸತಿ ಪ್ರದೇಶ ಎನ್ನಲಾಗಿದೆ. ಮೂಲಗಳ ಪ್ರಕಾರ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುತ್ತಿದ್ದಾಗ ಶಿವಸೇನೆ ನಾಯಕನ ಮೇಲೆ ದಾಳಿ ನಡೆದಿದೆ.

"ದಾಳಿಕೋರನನ್ನು ತಕ್ಷಣವೇ ಬಂಧಿಸಿ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ'' ಎಂದು ಸ್ಥಳೀಯ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ

Similar News