ಗುಜರಾತ್ ತೂಗು ಸೇತುವೆ ದುರಂತ : ಮೊರ್ಬಿ ನಗರಸಭೆಯ ಮುಖ್ಯಾಧಿಕಾರಿ ಅಮಾನತು
ಮೊರ್ಬಿ,ನ.4: ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮೊರ್ಬಿ ನಗರಸಭೆಯ ಮುಖ್ಯಾಧಿಕಾರಿ ಸಂದೀಪಸಿನ್ಹ ಝಾಲಾ ಅವರನ್ನು ಗುಜರಾತ್ ಸರಕಾರವು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಿದೆ.ಮಚ್ಚು ನದಿಗೆ ಅಡ್ಡವಾಗಿ ಬ್ರಿಟಷರ ಕಾಲದಲ್ಲಿ ನಿರ್ಮಿಸಲಾದ ತೂಗು ಸೇತುವೆ ರವಿವಾರ ಕುಸಿದಿತ್ತು.
ರಾಜ್ಯ ನಗರಾಭಿವೃದ್ಧಿ ಇಲಾಖೆಯು ಮೊರ್ಬಿ ನಗರಸಭೆಯ ಮುಖ್ಯಾಧಿಕಾರಿ ಸಂದೀಪಸಿನ್ಹ ಝಾಲಾ ಅವರನ್ನು ಅಮಾನತುಗೊಳಿಸಿದೆ. ಮುಂದಿನ ಆದೇಶದವರೆಗೆ ನಿವಾಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮುಖ್ಯಾಧಿಕಾರಿಯ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಟಿ.ಪಾಂಡ್ಯ ತಿಳಿಸಿದರು.ನಗರಸಭೆಯು 15 ವರ್ಷಗಳ ಅವಧಿಗೆ ತೂಗುಸೇತುವೆಯ ದುರಸ್ತಿ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಒರೆವಾ ಗ್ರೂಪ್‌ಗೆ ನೀಡಿತ್ತು.233 ಮೀ.ಉದ್ದ ಮತ್ತು 1.25 ಮೀ.ಅಗಲದ ತೂಗು ಸೇತುವೆಯನ್ನು 1877ರಲ್ಲಿ ನಿರ್ಮಿಸಲಾಗಿತ್ತು. ದುರಸ್ತಿಗಾಗಿ ಆರು ತಿಂಗಳುಗಳ ಕಾಲ ಮುಚ್ಚಲಾಗಿದ್ದ ಸೇತುವೆಯನ್ನು ಕಳೆದ ವಾರವಷ್ಟೇ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗಿತ್ತು.ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಂಭತ್ತು ಜನರನ್ನು ಬಂಧಿಸಿದ್ದಾರೆ.