ಘಾಝಿಯಾಬಾದ್ನಲ್ಲಿ ‘ಧರ್ಮ ಸಂಸದ್’ನಡೆಸದಂತೆ ಯತಿ ನರಸಿಂಹಾನಂದಗೆ ಪೊಲೀಸ್ ನೋಟಿಸ್
ಘಾಝಿಯಾಬಾದ್: ಘಾಝಿಯಾಬಾದ್ ಪೊಲೀಸರು ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿರದ ‘ಧರ್ಮ ಸಂಸದ್’ ಮತ್ತು ಅದಕ್ಕಾಗಿ ಸಿದ್ಧತಾ ಸಭೆಯನ್ನು ನಡೆಸದಂತೆ ಯತಿ ನರಸಿಂಹಾನಂದ ಅವರಿಗೆ ಗುರುವಾರ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ತನ್ನ ದ್ವೇಷ ಭಾಷಣಗಳಿಂದ ಆಗಾಗ್ಗೆ ವಿವಾದಗಳನ್ನು ಸೃಷ್ಟಿಸುತ್ತಿರುವ ಇಲ್ಲಿಯ ದಾಸ್ನಾ ದೇವಿ ದೇವಸ್ಥಾನದ ಅರ್ಚಕರಾಗಿರುವ ನರಸಿಂಹಾನಂದ ಮಾಜಿ ಬಿಜೆಪಿ ಸಂಸದ ವೈಕುಂಠ ಲಾಲ ಶರ್ಮಾರ ಜನ್ಮದಿನವಾದ ಡಿ.17ರಂದು ಮೂರು ದಿನಗಳ ‘ಧರ್ಮ ಸಂಸದ್’ ಆಯೋಜಿಸಿದ್ದು,ಡಿ.6ರಂದು ಸಿದ್ಧತಾ ಸಭೆಯನ್ನು ಕರೆದಿದ್ದಾರೆ.
ನೂರಾರು ಸಂತರು ಭಾಗವಹಿಸುವ ನಿರೀಕ್ಷೆಯಿರುವ ಧರ್ಮ ಸಂಸದ್ ನಡೆಸಲು ಪೊಲೀಸರು ಅವಕಾಶ ನೀಡುವುದಿಲ್ಲ,ಅಲ್ಲದೆ ಈ ಸಂತರಿಗೆ ಭದ್ರತೆಯನ್ನು ಒದಗಿಸುವುದೂ ಕಠಿಣವಾಗುತ್ತದೆ ಎಂದು ತಿಳಿಸಿದ ಘಾಝಿಯಾಬಾದ್ ಎಸ್‌ಪಿ ಇರಜ್ ರಾಜಾ ಅವರು,ಮುನ್ಸಿಪಲ್ ಚುನಾವಣೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದರು.
‘ಧರ್ಮ ಸಂಸದ್ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ,ಹೀಗಾಗಿ ಅದಕ್ಕೆ ಅನುಮತಿಯ ಅಗತ್ಯವಿಲ್ಲ. ಅಲ್ಲದೆ ಧರ್ಮ ಸಂಸದ್ ನಡೆಯುತ್ತಿರುವುದು ಇದೇ ಮೊದಲಲ್ಲ. ಏನೇ ಆದರೂ ನಾವು ಅದನ್ನು ಆಯೋಜಿಸುತ್ತೇವೆ. ಪೊಲೀಸರು ಮತ್ತು ಆಡಳಿತ ಅಡ್ಡಿಯನ್ನುಂಟು ಮಾಡಿದರೆ ಸಂತರು ತಮ್ಮ ಪ್ರತಿಭಟನೆಗಳನ್ನು ದಾಖಲಿಸಲಿದ್ದಾರೆ ’ ಎಂದು ನರಸಿಂಹಾನಂದ ಹೇಳಿಕೆಯಲ್ಲಿ ತಿಳಿಸಿದ್ದಾರೆ.