ನ.6: ಉಡುಪಿ ಐಎಂಎಯಿಂದ ಮಧುಮೇಹ ಜಾಗೃತಿ ಕಾರ್ಯಕ್ರಮ
ಉಡುಪಿ, ನ.4: ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಶಾಖೆ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೇಶವ ನಾಯಕ್ ಹಾಗೂ ಜಂಟಿ ಕಾರ್ಯದರ್ಶಿ ಡಾ.ಶ್ರುತಿ ಬಲ್ಲಾಳ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ.6ರಂದು ಬೆಳಗ್ಗೆ 9:30ರಿಂದ ಅಪರಾಹ್ನ 1 ಗಂಟೆಯವರೆಗೆ ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಆಶಾ ಕಾರ್ಯಕರ್ತರಿಗಾಗಿ ಮಧುಮೇಹದ ಬಗ್ಗೆ ಅರಿವು, ತಪಾಸಣಾ ಹಾಗೂ ಕಾರ್ಯಾ ಗಾರವನ್ನು ಬ್ರಹ್ಮಗಿರಿಯಲ್ಲಿರುವ ಐಎಂಎ ಭವನದಲಿ ಹಮ್ಮಿಕೊಂಡಿದೆ ಎಂದು ಡಾ.ನಾಯಕ್ ತಿಳಿಸಿದರು.
ಹಿರಿಯ ಫಿಶೀಷಿಯನ್ ಡಾ.ಆರ್.ಎನ್.ಭಟ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಪಿ.ಸುರೇಶ್ ಪ್ರಭು, ಕಾರ್ಯದರ್ಶಿ ಟಿ.ಕೇಶವರಾಯ ಪೈ ಇವರು ಅತಿಥಿಗಳಾಗಿ ಭಾಗವಹಿಸುವರು.
ಐಎಂಎ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಯಾಬಿಟಾಲೋಜಿಸ್ಟ್ ಡಾ.ಶ್ರುತಿ ಬಲ್ಲಾಳ್ ಹಾಗೂ ಗೈನಕಾಲೋಜಿಸ್ಟ್ ಡಾ.ರಾಜಲಕ್ಷ್ಮೀ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ನ.13ರ ರವಿವಾರ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಉಡುಪಿ -ಕರಾವಳಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಹಾಗೂ ಉಡುಪಿಯ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ನಡಿಗೆ (ವಾಕಾಥಾನ್)ನಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 7:30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಿಂದ ಪ್ರಾರಂಭಗೊಳ್ಳುವ ಈ ನಡಿಗೆ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಬಳಿ ಮುಕ್ತಾಯಗೊಳ್ಳಲಿದೆ. ನಡಿಗೆಗೆ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10:30ಕ್ಕೆ ದೇವಸ್ಥಾನದ ಭವಾನಿ ಮಂಟಪದಲ್ಲಿ ನರ್ಸಿಂಗ್ ವಿದ್ಯಾರ್ಥಿ ಗಳಿಗೆ ಮಾಹಿತಿ ಕಾರ್ಯಾಗಾರವನ್ನು ಹಾಗೂ ನಾಗರಿಕರಿಗೆ ಮಧುಮೇಹ ತಪಾಸಣಾ ಶಿಬಿರವನ್ನು ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇನ್ನು ನ.14ರಂದು ಬೆಳಗ್ಗೆ 7:00ರಿಂದ ಅಪರಾಹ್ನ 12:00ಗಂಟೆಯವರೆಗೆ ಕೊಂಕಣ ರೈಲ್ವೆ ಉಡುಪಿ ಸಿಬ್ಬಂದಿ ಗಳಿಗೆ ಹಾಗೂ ರೈಲು ಪ್ರಯಾಣಿಕರಿಗೆ ಮಧುಮೇಹ ತಪಾಸಣಾ ಶಿಬಿರವನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ನ.20ರಂದು ಅಪರಾಹ್ನ 2:30ರಿಂದ 4:00ರವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಮಧುಮೇಹದ ಬಗ್ಗೆ ಮಾಹಿತಿ, ಅರಿವು, ತಪಾಸಣೆಯನ್ನು ನೇಜಾರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ನ.27ರಂದು ಉಡುಪಿಯ ನಾಗರಿಕರಿಗಾಗಿ ಮಧುಮೇಹದ ಬಗ್ಗೆ ತಪಾಸಣೆ ಹಾಗೂ ಮಾಹಿತಿ ಕಾರ್ಯಾಗಾರ ವನ್ನು ಬ್ರಹ್ಮಗಿರಿಯಲ್ಲಿರುವ ಐಎಂಎ ಭವನ ದಲ್ಲಿ ಬೆಳಗ್ಗೆ 9:30ರಿಂದ ಅಪರಾಹ್ನ 1:00ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರವನ್ನು ಹಿರಿಯ ವೈದ್ಯ ಡಾ.ಅಶೋಕ್‌ಕುಮಾರ್ ವೈ.ಜಿ. ಉದ್ಘಾಟಿಸಲಿದ್ದು, ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಹಾಗೂ ಡಾ.ಗಣಪತಿ ಹೆಗಡೆ ಉಪಸ್ಥಿತರಿದ್ದರು.