‘ಮೀಡಿಯಾ ಒನ್’ ಪರವಾನಿಗೆ ನವೀಕರಣ ವಿರೋಧಿಸಿ ಕೇಂದ್ರ ಸರಕಾರ ಸಲ್ಲಿಸಿದ ಕಡತಕ್ಕೆ ಸುಪ್ರೀಂ ಅಭಿಪ್ರಾಯ

‘ಅದರಲ್ಲಿರುವ ವಿಷಯ ಅಸ್ಪಷ್ಟ’

Update: 2022-11-04 18:23 GMT

ಹೊಸದಿಲ್ಲಿ, ನ. 4:  ಮಲಯಾಳಂ ವಾಹಿನಿ ‘ಮೀಡಿಯಾ ಒನ್’ನ ಪರವಾನಿಗೆ ನವೀಕರಣ ವಿರೋಧಿಸಿ ಕೇಂದ್ರ ಸರಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಕಡತವನ್ನು ಗುರುವಾರ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಅದರಲ್ಲಿರುವ ವಿಷಯ ಅಸ್ಪಷ್ಟವಾಗಿದೆ ಎಂದಿದೆ.    

ಕಡತದಲ್ಲಿನ ನಿರ್ದಿಷ್ಟ ಪ್ಯಾರಾ ಹಾಗೂ ನಡಾವಳಿಗಳ ಬಗ್ಗೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ದ್ವಿಸದಸ್ಯರ ಪೀಠ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾದ್ ಅವರ ಗಮನ ಸೆಳೆಯಿತು. ಅಲ್ಲದೆ, ಇದು ಎಷ್ಟು ಅಸ್ಪಷ್ಟವಾಗಿದೆ ಎಂದು ಹೇಳಿತು. 

‘‘ಅದರಲ್ಲಿ ವಿಸ್ತೃತವಾದ ವಿವರಗಳಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿದೆ... ಈಗ ಈ ಹಿನ್ನೆಲೆಯಲ್ಲಿ ನೀವು ಕೇರಳ ಉಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಗಮನಿಸಿದರೆ... ಉಚ್ಚ ನ್ಯಾಯಾಲಯ ಈ ಎರಡು ಅಭಿಪ್ರಾಯಗಳನ್ನು ಯಾಕೆ ವ್ಯಕ್ತಪಡಿಸಿತು ಎಂದು ನಿಮಗೆ ಅರಿವಾಗಬಹುದು’’ ಎಂದು ಅದು ತಿಳಿಸಿತು. 
ಅದರಲ್ಲಿರುವ ಸತ್ಯದ ಕುರಿತು ತಾನು ಯಾವುದೇ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಸತ್ಯದ ಕುರಿತು ತಾನು ಏನನ್ನೂ ಹೇಳಲಾರೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಹೇಳಿದರು. 

ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಕೂಡ ಒಳಗೊಂಡ ಪೀಠ ಪ್ರಕರಣದ ಕುರಿತ ತನ್ನ ಆದೇಶವನ್ನು ಕಾಯ್ದಿರಿಸಿತು. 
ಹಿಂದಿನ ದಿನ ವಾಹಿನಿಯ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ ದವೆ, ಅದರ ಸಂಪಾದಕರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹುಸೇಫಾ ಅಹ್ಮದಿ ಹಾಗೂ ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಕೇಂದ್ರ ಸರಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಕಡತವನ್ನು ನ್ಯಾಯಾಲಯ ಪರಿಶೀಲಿಸುವುದನ್ನು ವಿರೋಧಿಸಿದ್ದರು.

Similar News