ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ: ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿದ ಬಿಜೆಪಿ ನಾಯಕರು

Update: 2022-11-07 15:26 GMT

ಹೊಸದಿಲ್ಲಿ: ಶಿಕ್ಷಣ ಪ್ರವೇಶಾತಿ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ (EWS) ಸೇರಿದ ಜನರಿಗೆ 10 ಪ್ರತಿಶತ ಮೀಸಲಾತಿಯನ್ನು ಒದಗಿಸುವ 103 ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ, EWS ಕೋಟಾದ ಕಾನೂನು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.

ದೇಶದ ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸುವ ತನ್ನ "ಮಿಷನ್" ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ತೀರ್ಪು "ಗೆಲುವು" ಎಂದು ಬಿಜೆಪಿ ಬಣ್ಣಿಸಿದೆ. "ತಮ್ಮ ಅಜೆಂಡಾಗಳ ಮೂಲಕ ನಾಗರಿಕರ ನಡುವೆ ವೈಷಮ್ಯವನ್ನು ಬಿತ್ತಲು ಪ್ರಯತ್ನಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿ ಪ್ರತಿಪಕ್ಷಗಳ ಮುಖದ ಮೇಲೆ ಕಪಾಳಮೋಕ್ಷ ಮಾಡಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಬಂದಿದೆ" ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

“ಸುಪ್ರೀಂ ಕೋರ್ಟ್ ಮೀಸಲಾತಿ ಇಲ್ಲದ ವಿಭಾಗಗಳಿಗೆ EWS ಮೀಸಲಾತಿಯ ಕಾನೂನುಬದ್ಧತೆಯನ್ನು ಎತ್ತಿ ಹಿಡಿದಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಡವರ ಕಲ್ಯಾಣದ ದೃಷ್ಟಿಗೆ ಿದು ಮತ್ತೊಂದು ದೊಡ್ಡ ಮುನ್ನಡೆಯಾಗಿದೆ. ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ದೊಡ್ಡ ಉತ್ತೇಜನ ನೀಡಿದೆ, ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದ್ದಾರೆ.

ಈ ತೀರ್ಪು ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಶ್ವಾಸ್ ಪ್ರತಿಜ್ಞೆಯನ್ನು ಬಲಪಡಿಸುತ್ತದೆ ಎಂದು ತೆಲಂಗಾಣ ಸಂಸದ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.

ಬಿಜೆಪಿಯ ಹಿರಿಯ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಟ್ವೀಟ್ ಮಾಡಿ, “ಎಲ್ಲ ಬಡವರು ಒಂದೇ ಜಾತಿಯನ್ನು ಹೊಂದಿದ್ದಾರೆ, ಅವರು ಬಡವರು. ಈ ಮೀಸಲಾತಿಯಿಂದ ದೇಶದಲ್ಲಿ ಏಕತೆ ಮೂಡುತ್ತದೆ. ಪ್ರಪಂಚದ ಎಲ್ಲಾ ನಿರ್ಗತಿಕ ಜನರು ಒಗ್ಗೂಡಿ ಉತ್ತಮ ಜೀವನಕ್ಕಾಗಿ ಹೋರಾಡಬೇಕು ಎಂಬುದು ನನ್ನ ಮನವಿ. ಖಾಸಗಿ ವಲಯದಲ್ಲೂ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.” ಎಂದು ಹೇಳಿದ್ದಾರೆ.

2015ರಲ್ಲಿ ಮೀಸಲಾತಿಗಾಗಿ ಪಾಟೀದಾರ್‌ ಸಮುದಾಯದ ಆಂದೋಲನದ ನೇತೃತ್ವ ವಹಿಸಿದ್ದ ʼಪಾಟಿದಾರ್ ಅನಾಮತ್ ಆಂದೋಲನʼ ಸಮಿತಿಯ ಮಾಜಿ ಸಂಚಾಲಕ, ಬಿಜೆಪಿ ಮುಖಂಡ ಹಾರ್ದಿಕ್ ಪಟೇಲ್, 68 ಸಮುದಾಯಗಳ ಸದಸ್ಯರು ಕೋಟಾ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದರು. “ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. 68 ಸಮುದಾಯಗಳ ಸದಸ್ಯರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ. ನಮ್ಮ (ಕೋಟಾ) ಆಂದೋಲನದಿಂದ ಜನರು ಪ್ರಯೋಜನ ಪಡೆಯುತ್ತಾರೆ ಎಂದು ನಾನು ಹೆಮ್ಮೆಪಡುತ್ತೇನೆ ಎಂದು ಪಟೇಲ್ ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು "ಎಲ್ಲಾ ಜಾತಿಗಳು ಮತ್ತು ಧರ್ಮಗಳ ಬಡ ಮತ್ತು ದುರ್ಬಲ ವರ್ಗಗಳಿಗೆ ಹೆಚ್ಚಿನ ಪರಿಹಾರವನ್ನು ತರುತ್ತದೆ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. "ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ನಿಟ್ಟಿನಲ್ಲಿ ನಿರ್ಧಾರವು ಬಡವರನ್ನು ಮುಖ್ಯವಾಹಿನಿಗೆ ತರಲು ಖಂಡಿತವಾಗಿಯೂ ಉಪಯುಕ್ತವಾಗಿದೆ" ಎಂದು ಅವರು ಹೇಳಿದ್ದಾರೆ.

Similar News