ಮಹಿಳಾ ಪತ್ರಕರ್ತರಿಗೆ ಆನ್ಲೈನ್ ನಿಂದನೆ ಪ್ರಕರಣ ಹೆಚ್ಚಳ: ವರದಿ

Update: 2022-11-07 16:12 GMT

ಲಂಡನ್, ನ.7: ತಮ್ಮ ವೃತ್ತಿಜೀವನದಲ್ಲಿ ಬಹುಪಾಲು ಮಹಿಳಾ ಪತ್ರಕರ್ತರು(Journalists) ಯಾವುದಾದರೊಂದು ರೀತಿಯಲ್ಲಿ ಆನ್ ಲೈನ್ ನಿಂದನೆ ಮತ್ತು ಬೆದರಿಕೆಯನ್ನು ಅನುಭವಿಸಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ ಹೊಸ ವರದಿ ಹೇಳಿದೆ. ಜಗತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಇರುವ ಬೆದರಿಕೆಯನ್ನು ಈ ವರದಿ ಪ್ರತಿಬಿಂಬಿಸಿದೆ.

‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್(ಐಸಿಎಫ್ಜೆ) ಮತ್ತು ಶೆಫೀಲ್ಡ್ ವಿವಿ(Sheffield Vv) ನಡೆಸಿದ ಸಂಶೋಧನೆಯನ್ನು ಆಧರಿಸಿದ ವರದಿಯು 15 ದೇಶಗಳ 1000ಕ್ಕೂ ಅಧಿಕ ಮಹಿಳಾ ಪತ್ರಕರ್ತರ ಪ್ರತಿಕ್ರಿಯೆಯನ್ನು ದಾಖಲಿಸಿಕೊಂಡಿದ್ದು ಜಾಗತಿಕವಾಗಿ ಸುಮಾರು 75%ದಷ್ಟು ಮಹಿಳಾ ಪತ್ರಕರ್ತರು ಆನ್ ಲೈನ್ ದ್ವೇಷ ಮತ್ತು ಬೆದರಿಕೆಗೆ ಒಳಗಾಗಿರುವುದನ್ನು ತೋರಿಸಿದೆ. 

ಪ್ರತಿಕ್ರಿಯಿಸಿದವರಲ್ಲಿ 25%ದಷ್ಟು ಜನರು ದೈಹಿಕ ಹಿಂಸಾಚಾರದ ಬೆದರಿಕೆಯನ್ನು ಸ್ವೀಕರಿಸಿರುವುದಾಗಿ, 18%ದಷ್ಟು ಜನರು ಲೈಂಗಿಕ ದೌರ್ಜನ್ಯದ ಬೆದರಿಕೆಗಳನ್ನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಕೆಲವು ಅನಗತ್ಯ ಜನತೆ ತಮಗೆ ಖಾಸಗಿ ಸಂದೇಶ ರವಾನಿಸುವ ಮೂಲಕ ಬೆದರಿಕೆ ಮತ್ತು ಕಿರುಕುಳ ನೀಡುತ್ತಿರುವುದಾಗಿ 48% ಜನರು ಹೇಳಿದ್ದಾರೆ.

 ಆನ್ಲೈನ್ ಪರಿಸರದಲ್ಲಿ ಮಹಿಳೆಯರ ವಿರುದ್ಧದ ಆಫ್ ಲೈನ್ ಹಿಂಸಾಚಾರಕ್ಕೆ ಮಹಿಳೆಯರ ವರ್ತನೆ, ನಡವಳಿಕೆ, ವ್ಯಕ್ತಿತ್ವವನ್ನು ದೂಷಿಸುವ ಮೂಲಕ ಪಿತೃಪ್ರಭುತ್ವದ ರೂಢಿಗಳನ್ನು ಆಕ್ರಮಣಕಾರಿಯಾಗಿ ಬಲಪಡಿಸಲಾಗುತ್ತಿದೆ ಎಂದು ವರದಿಯಲ್ಲಿ ಖಂಡಿಸಲಾಗಿದೆ.

 ಮಹಿಳಾ ಪತ್ರಕರ್ತರ ಮೇಲಿನ ದೌರ್ಜನ್ಯದ ಮಟ್ಟದಲ್ಲಿ ನಾವೀಗ ಬಿಕ್ಕಟ್ಟಿನ ಹಂತದಲ್ಲಿರುವುದನ್ನು ವರದಿ ಕಂಡುಹಿಡಿದಿದೆ ಎಂದು ಅಧ್ಯಯನ ತಂಡದ ಹಿರಿಯ ಸದಸ್ಯೆ ಪ್ರೊ. ಕಲಿನಾ ಬೊಂಚೆವಾ ಹೇಳಿದ್ದಾರೆ. ಆನ್ ಲೈನ್ ವೇದಿಕೆಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಕೆಟ್ಟದಾಗಿ ನಿಂದನೆಗೆ ಗುರಿಯಾಗುತ್ತಿರುವುದು ಸ್ಪಷ್ಟವಾಗಿರುವುದರಿಂದ ಬೃಹತ್ ಟೆಕ್ ಸಂಸ್ಥೆಗಳು ತಮ್ಮ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮಹಿಳಾ ಪತ್ರಕರ್ತರಿಗೆ ಸುರಕ್ಷಿತ ಸ್ಥಳವನ್ನಾಗಿ ಮಾಡಬೇಕಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Similar News