ರಶ್ಯದಿಂದ ತೈಲ ಖರೀದಿ ವಿಷಯದಲ್ಲಿ ಭಾರತಕ್ಕೆ ಅಮೆರಿಕದಿಂದ ಸಲಹೆ

Update: 2022-11-08 18:56 GMT

ವಾಷಿಂಗ್ಟನ್, ನ.8: ರಶ್ಯದ ತೈಲದ ಮೇಲಿನ ಬೆಲೆ ಮಿತಿಯಿಂದ ಭಾರತಕ್ಕೆ ಲಾಭವಿರಬಹುದು ಮತ್ತು ಇದರ ಅನುಕೂಲವನ್ನು ಆ ದೇಶ ಪಡೆದುಕೊಳ್ಳುತ್ತದೆ ಎಂಬ  ವಿಶ್ವಾಸವಿದೆ ಎಂದು ಅಮೆರಿಕದ ಹಣಕಾಸು ಇಲಾಖೆಯ ಕಾರ್ಯದರ್ಶಿ ಜಾನೆಟ್ ಯೆಲೆನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ .

ರಶ್ಯದ ತೈಲ ಖರೀದಿಗೆ ಭಾರತವು ವಿಮೆಯಂತಹ ಪಾಶ್ಚಿಮಾತ್ಯ  ಹಣಕಾಸು ಸೇವೆಗಳನ್ನು ಬಳಸಲು ಬಯಸಿದರೆ, ಬೆಲೆ ಮಿತಿಯು ಅವರ ಖರೀದಿಗೆ ಅನ್ವಯಿಸುತ್ತದೆ. ಆದರೆ ಅವರು ಇತರ ಹಣಕಾಸು ಸೇವೆಗಳನ್ನು ಬಳಸುತ್ತಿದ್ದರೂ ಸಹ, ಬೆಲೆಯ ಮಿತಿಯು ಅವರಿಗೆ ವಿಶ್ವ ಮಾರುಕಟ್ಟೆಗಳಲ್ಲಿ ಉತ್ತಮ ರಿಯಾಯಿತಿ ಪಡೆಯುವ ನಿಟ್ಟಿನ ಮಾತುಕತೆಯಲ್ಲಿ ಹೆಚ್ಚಿನ ಹಿಡಿತವನ್ನು ನೀಡುತ್ತದೆ ಎಂಬುದು ನಮ್ಮ ವಿಶ್ವಾಸವಾಗಿದೆ. ಈ ವ್ಯವಸ್ಥೆಯಿಂದ ಭಾರತ ಪ್ರಯೋಜನ ಪಡೆಯುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದವರು ಹೇಳಿದ್ದಾರೆ. ಈ ವಾರ ಜಾನೆಟ್ ಯೆಲೆನ್ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ರಶ್ಯವು ತೈಲದಿಂದ ಲಾಭ ಮಾಡುವುದನ್ನು ತಡೆಯುವ ಉದ್ದೇಶ ಹೊಂದಿರುವ ಅಮೆರಿಕ ಹಾಗೂ ಜಿ7 ಗುಂಪಿನ ಅದರ ಮಿತ್ರರಾಷ್ಟ್ರಗಳು, ರಶ್ಯದ ಬಹುತೇಕ ತೈಲ ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗುವುದನ್ನು ಖಾತರಿಪಡಿಸಲು ಉದ್ದೇಶಿಸಿವೆ. ಸಮುದ್ರದ ಮೂಲಕ ತೈಲ ಸಾಗಾಣಿಕೆಯ ಬೆಲೆಗಳ ಮಿತಿಯನ್ನು ಡಿಸೆಂಬರ್ 5 ರಿಂದ ಜಾರಿಗೊಳಿಸಲು ಜಿ7 ದೇಶಗಳು ಯೋಜಿಸಿವೆ. ವಿಶ್ವದ 3ನೇ ಅತ್ಯಧಿಕ ತೈಲ ಆಮದು ಮಾಡಿಕೊಳ್ಳುವ ದೇಶವಾದ ಭಾರತ ತನ್ನ ಕಚ್ಛಾತೈಲದ ಅಗತ್ಯದ 85%ದಷ್ಟನ್ನು ರಶ್ಯದಿಂದ ಆಮದು ಮಾಡಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಜಾರಿಗೊಳಿಸಿದ ಬಳಿಕ ಡಿಸ್ಕೌಂಟ್ ದರದಲ್ಲಿ ತೈಲ ಪೂರೈಸುವ ರಶ್ಯದ ನಿರ್ಧಾರದಿಂದ ಲಾಭ ಪಡೆಯಲು ಭಾರತ  ಮುಂದಾಗಿದೆ.

Similar News