ಜಾರ್ಖಂಡ್: ಇಬ್ಬರು ಕಾಂಗ್ರೆಸ್ ಶಾಸಕರ ಮೇಲೆ ಐಟಿ ದಾಳಿ

100 ಕೋಟಿ ರೂ. ಅಕ್ರಮ ವ್ಯವಹಾರ ‘ಬಯಲು’

Update: 2022-11-08 19:06 GMT

ಹೊಸದಿಲ್ಲಿ,ನ. 8: ಜಾರ್ಖಂಡ್‌ನ  ಇಬ್ಬರು ಕಾಂಗ್ರೆಸ್ ಶಾಸಕರಿಗೆ ಸೇರಿದ ಸ್ಥಳಗಳ ಮೇಲೆ  ದಾಳಿ ನಡೆಸಿ, 100 ಕೋಟಿ ರೂ. ಮೌಲ್ಯದ ಅಕ್ರಮ ನಗದು ವ್ಯವಹಾರಗಳು ನಡೆದಿರುವುದನ್ನು   ಪತ್ತೆಹಚ್ಚಿರುವುದಾಗಿ ಆದಾಯ ತೆರಿಗೆ ಇಲಾಖೆಯು ಮಂಗಳವಾರ ತಿಳಿಸಿದೆ.

ನವೆಂಬರ್ 4ರಿಂದ ಜಾರ್ಖಂಡ್‌ನ ರಾಂಚಿ, ಗೊಡ್ಡ, ಬೆರ್ಮೊ,ದುಮ್ಕಾ, ಜಮಶೆಡ್‌ಪುರ ಹಾಗೂ ಚಾಯಿಬಾಸಾ  ಬಿಹಾರದ ಪಟ್ಟಾ, ಹರ್ಯಾಣದ ಗುರುಗ್ರಾಮಗಳಲ್ಲಿರುವ 50  ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆಯೆಂದು ಆದಾಯ ತೆರಿಗೆ ಇಲಾಖೆ ಹೇಳಕೆಯೊಂದರಲ್ಲಿ ತಿಳಿಸಿದೆ.

ಜಾರ್ಖಂಡ್ ಕಾಂಗ್ರೆಸ್ ಶಾಸಕರಾದ ಕುಮಾರ್ ಜೈಮಂಗಲ್ ಯಾನೆ ಅನೂಪ್‌ಸಿಂಗ್ ಹಾಗೂ ಪ್ರದೀಪ್ ಯಾದವ್ ಅವರಿಗೆ ಸೇರಿದ ಸ್ಥಳಗಳ ಮೇಲೆ ನಡೆಸಲಾಗಿದೆಯೆಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಬೆರ್ಮೊ ಕ್ಷೇತ್ರದ ಶಾಸಕ ಜೈಮಂಗಲ್ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ ಆದಾಯ ತೆರಿಗೆ ಇಲಾಖೆಯು ತನ್ನ ನಿವಾಸದ ಮೇಲೆ ದಾಳಿ ನಡೆಸಿರವುದನ್ನು ದೃಢಪಡಿಸಿದ್ದಾರೆ.  ಐಟಿ ಅಧಿಕಾರಿಗಳಿಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

ಐಟಿ ದಾಳಿಗೆ ಒಳಗಾದ ಇನ್ನೋರ್ವ ಶಾಸಕ   ಪ್ರದೀಪ್ ಯಾದವ್ ಅವರು ಜೆವಿಎಂ-ಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಅವರು ಪೊರಿಯಾಹಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ನೇತೃತ್ವದ  ಜೆಎಂಎಂ  ಮೈತ್ರಿಕೂಟದ ಸರಕಾರದಲ್ಲಿ ಕಾಂಗ್ರೆಸ್ ಪಾಲುದಾ ಪಕ್ಷವಾಗಿದೆ.

Similar News