ನೇಪಾಳದಲ್ಲಿ ಭೂಕಂಪ: 6 ಮಂದಿ ಮೃತ್ಯು; ದಿಲ್ಲಿಯಲ್ಲೂ ಕಂಪಿಸಿದ ಭೂಮಿ

Update: 2022-11-09 02:13 GMT

ಹೊಸದಿಲ್ಲಿ: ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ಹೊಂದಿದ್ದ ಭೂಕಂಪ ಬುಧವಾರ ನಸುಕಿನಲ್ಲಿ ನೇಪಾಳದಲ್ಲಿ ಸಂಭವಿಸಿದೆ. ದೋಟಿ ಜಿಲ್ಲೆಯಲ್ಲಿ ಭೂಕಂಪದ ಕಾರಣದಿಂದ ಮನೆ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ನಸುಕಿನ 2 ಗಂಟೆ ಸುಮಾರಿಗೆ ದಿಲ್ಲಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡಾ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪ ನೆಲಮಟ್ಟದಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.

ಭೂಕಂಪದ ಕೇಂದ್ರಬಿಂದು ನೇಪಾಳದ ಗಡಿಗೆ ಹೊಂದಿಕೊಂಡಿರುವ ಉತ್ತರಾಖಂಡದ ಪಿತ್ತೋರ್‌ಗಢದಲ್ಲಿತ್ತು ಎಂದು ತಿಳಿದು ಬಂದಿದೆ.

ನೇಪಾಳದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ಮುಂಜಾನೆ 4.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಹಿಂದಿನ ಭೂಕಂಪ ಕಠ್ಮಂಡುವಿನಿಂದ 155 ಕಿಲೋಮೀಟರ್ ಈಶಾನ್ಯಕ್ಕೆ 100 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು.

2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ ಕೇಂದ್ರ ನೇಪಾಳದಲ್ಲಿ ಕಠ್ಮಂಡು ಮತ್ತು ಪೊಖಾರಾ ನಗರಗಳ ಮಧ್ಯೆ ಸಂಭವಿಸಿತ್ತು. ಇದರಲ್ಲಿ ಕನಿಷ್ಠ 8964 ಮಂದಿ ಮೃತಪಟ್ಟಿದ್ದರು ಹಾಗೂ 22 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Similar News