ಹೆದ್ದಾರಿಯನ್ನು ಕಳಪೆಯಾಗಿ ನಿರ್ಮಿಸಿದ್ದಕ್ಕೆ ಸಾರ್ವಜನಿಕರ ಕ್ಷಮೆಯಾಚಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2022-11-09 17:49 GMT

ಭೋಪಾಲ,ನ.9: ಮಧ್ಯಪ್ರದೇಶದಲ್ಲಿ ಹೆದ್ದಾರಿಯೊಂದರ ಭಾಗಶಃ ಕಳಪೆ ನಿರ್ಮಾಣಕ್ಕಾಗಿ ಕ್ಷಮೆ ಯಾಚಿಸಿರುವ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ ಗಡ್ಕರಿಯವರು ಯೋಜನೆಗಾಗಿ ಹೊಸ ಗುತ್ತಿಗೆಗೆ ಆದೇಶಿಸಿದ್ದಾರೆ.

ಸೋಮವಾರ ಮಧ್ಯಪ್ರದೇಶದ ಜಬಲಪುರದಲ್ಲಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರೊಂದಿಗೆ ಎಂಟು ರಸ್ತೆ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಗಡ್ಕರಿ,‘ನನಗೆ ದುಃಖವಾಗಿದೆ,ನೋವಾಗಿದೆ. ತಪ್ಪು ಮಾಡಿದಾಗ ಕ್ಷಮೆ ಯಾಚಿಸಲು ನಾನು ಹಿಂಜರಿಯುವುದಿಲ್ಲ. ಮಾಂಡ್ಲಾ-ಜಬಲಪುರ ಹೆದ್ದಾರಿಯಲ್ಲಿ 400 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬರೇಲಾದಿಂದ ಮಾಂಡ್ಲಾವರೆಗಿನ 63 ಕಿ.ಮೀ.ಉದ್ದದ ಭಾಗವು ನನಗೆ ತೃಪ್ತಿ ನೀಡಿಲ್ಲ’ ಎಂದು ಹೇಳಿದಾಗ ಸಭಿಕರು ಕರತಾಡನದ ಮೂಲಕ ಅವರನ್ನು ಪ್ರಶಂಸಿಸಿದರು. ‘ಸಮಸ್ಯೆಯಿದೆ ಮತ್ತು ನಿಮ್ಮಲ್ಲಿ ಹೆಚ್ಚಿನವರು ಕಷ್ಟಗಳನ್ನು ಎದುರಿಸುತ್ತಿದ್ದೀರಿ. ಇಲ್ಲಿಗೆ ಬರುವ ಮುನ್ನ ನನ್ನ ಅಧಿಕಾರಿಗಳೊಂದಿಗೆ ನಾನು ಮಾತನಾಡಿದ್ದೇನೆ. ಏನೇ ಕೆಲಸ ಬಾಕಿಯಿದ್ದರೂ ಆ ಬಗ್ಗೆ ಚರ್ಚಿಸುವಂತೆ ನಾನು ಅವರಿಗೆ ತಿಳಿಸಿದ್ದೇನೆ. ಯೋಜನೆಯನ್ನು ಅಮಾನತುಗೊಳಿಸುವಂತೆ ಮತ್ತು ಹಳೆಯ ರಸ್ತೆಯನ್ನು ದುರಸ್ತಿಗೊಳಿಸುವಂತೆ,ಹೊಸದಾಗಿ ಟೆಂಡರ್ ಕರೆದು ಉತ್ತಮ ರಸ್ತೆಯನ್ನು ನೀಡುವಂತೆ ಸೂಚಿಸಿದ್ದೇನೆ. ನೀವು ಈವರೆಗೆ ಎದುರಿಸಿರುವ ಕಷ್ಟಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ ’ಎಂದು ಗಡ್ಕರಿ ಹೇಳಿದರು.

ತನ್ನ ಅಧಿಕಾರಾವಧಿಯಲ್ಲಿ ಆರು ಲ.ಕೋ.ರೂ.ಗಳ ವೆಚ್ಚದಲ್ಲಿ ಮಧ್ಯಪ್ರದೇಶಕ್ಕೆ ರಸ್ತೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದ ಅವರು,ಭೂಸ್ವಾಧೀನ ಮತ್ತು ಅರಣ್ಯ ತೆರವನ್ನು ತ್ವರಿತಗೊಳಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದರು.

Similar News