ಸುಪ್ರೀಂ ಕೋರ್ಟ್‌ನಲ್ಲಿ ನಗದು ಅಮಾನ್ಯೀಕರಣ ವಿಚಾರಣೆ: ಅಫಿಡವಿಟ್ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಕೇಂದ್ರ

Update: 2022-11-09 17:25 GMT

ಹೊಸದಿಲ್ಲಿ, ನ.9: 2016ರ ನಗದು ಅಮಾನ್ಯೀಕರಣ ಪ್ರಕ್ರಿಯೆಯನ್ನು  ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಮುಂದೂಡಿದೆ. ನ್ಯಾಯಾಲಯಕ್ಕೆ ಸಮಗ್ರವಾದ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರಕಾರವು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ  ಅದು ಈ ಕ್ರಮವನ್ನು ಕೈಗೊಂಡಿದೆ.

ಅಕ್ಟೋಬರ್ 12ರಂದು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಝೀರ್, ಬಿ.ಆರ್.ಗವಾಯಿ, ಎ.ಎಸ್. ಬೋಪಣ್ಣ, ವಿ.ರಾಮಸುಬ್ರಮಣಿಯನ್ ಹಾಗೂ ಬಿ.ವಿ. ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠವು ನಿರ್ದೇಶ ನೀಡಿದೆ.

2016ರಲ್ಲಿ ಅಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ಅಮಾನ್ಯೀಕರಣಗೊಳಿಸುವ  ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ 58 ಅರ್ಜಿಗಳನ್ನು  ನ್ಯಾಯಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು 2016ರ ನವೆಂಬರ್ 8ರ ಮಧ್ಯರಾತ್ರಿಯಿಂದಲೇ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಭ್ರಷ್ಟಾಚಾರ, ಕಪ್ಪುಹಣ ಹಾಗೂ ಭಯೋತ್ಪಾದನೆಯ ವಿರುದ್ಧ ಹೋರಾಡಲು ನಗದು ಅಮಾನ್ಯೀಕರಣದ ನಿರ್ಧಾರವನ್ನು ಕೈಗೊಂಡಿರುವುದಾಗಿ ಮೋದಿ ಹೇಳಿದ್ದರು.

 ನಗದು ಅಮಾನ್ಯೀಕರಣ ಪ್ರಕ್ರಿಯೆಯು  ಪೌರರ ಹಲವಾರು ಸಾಂವಿಧಾನಿಕ ಹಕ್ಕುಗಳನ್ನು  ಉಲ್ಲಂಘಿಸಿದೆಯೆಂದು ಅರ್ಜಿದಾರರು ವಾದಿಸಿದ್ದರು. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ನೀಡಿರುವಂತಹ ಆಸ್ತಿಯ ಹಕ್ಕು (300ಎ ವಿಧಿ), ಸಮಾನತೆಯ ಹಕ್ಕು (14ನೇ ವಿಧಿ), ವ್ಯಾಪಾರ, ಉದ್ಯಮ ಅವಾ ವೃತ್ತಿಯ ಹಕ್ಕು (19ನೇ ವಿಧಿ), ಬದುಕುವ ಹಕ್ಕು ಮತ್ತು ಜೀವನೋಪಾಯದ ಹಕ್ಕು (21ನೇ ವಿಧಿ)ಗಳನ್ನು  ನಗದು ಅಮಾನ್ಯೀಕರಣ ಪ್ರಕ್ರಿಯೆಯು ಉಲ್ಲಂಘಿಸಿದೆಯೆಂದು ಅರ್ಜಿದಾರರು ಆರೋಪಿಸಿದ್ದರು.
ಬುಧವಾರ ನಡೆದ ಆಲಿಕೆಯ ಸಂದರ್ಭದಲ್ಲಿ ಕೇಂದ್ರ ಸರಕಾರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಅಫಿಡವಿಟ್ ಸಲ್ಲಿಕೆಗೆ ಆಗಿರುವ ವಿಳಂಬಕ್ಕಾಗಿ ಕ್ಷಮೆ ಯಾಚಿಸಿದ್ದು, ಒಂದು ವಾರದೊಳಗೆ ಅದನ್ನು ಸಲ್ಲಿಸುವುದಾಗಿ  ನ್ಯಾಯಪೀಠಕ್ಕೆ ತಿಳಿಸಿದರು.

Similar News