ಜಿ20 ಲಾಂಛನದಲ್ಲಿ ಕಮಲದ ಬಳಕೆ ಆಘಾತಕಾರಿ:ಕಾಂಗ್ರೆಸ್

ರಾಜೀವ ಎಂದರೂ ಕಮಲವೇ:ಬಿಜೆಪಿ ತಿರುಗೇಟು

Update: 2022-11-09 18:15 GMT

ಹೊಸದಿಲ್ಲಿ,ನ.9: ಭಾರತದ ಜಿ20 ಅಧ್ಯಕ್ಷತೆಗಾಗಿ ಲಾಂಛನದಲ್ಲಿ ಬಿಜೆಪಿಯ ಚುನಾವಣಾ ಚಿಹ್ನೆಯಾಗಿರುವ ಕಮಲದ ಬಳಕೆಯನ್ನು ತೀಕ್ಷ್ಣವಾಗಿ ಟೀಕಿಸಿರುವ ಕಾಂಗ್ರೆಸ್,ಆಡಳಿತ ಪಕ್ಷವು ‘ನಾಚಿಕೆಯಿಲ್ಲದೆ ’ ತನ್ನನ್ನು ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರು ಇಂತಹುದೇ ಕ್ರಮವನ್ನು ತಿರಸ್ಕರಿಸಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ ರಮೇಶ ಅವರು ಬುಧವಾರ ನೆನಪಿಸಿದ್ದಾರೆ. ‘70 ವರ್ಷಗಳಿಗೂ ಹಿಂದೆ ಕಾಂಗ್ರೆಸ್ ಧ್ವಜವನ್ನು ಭಾರತದ ಧ್ವಜವನ್ನಾಗಿಸುವ ಪ್ರಸ್ತಾವವನ್ನು ನೆಹರು ತಿರಸ್ಕರಿಸಿದ್ದರು. ಈಗ ಬಿಜೆಪಿಯ ಚುನಾವಣಾ ಚಿಹ್ನೆಯು ಭಾರತದ ಜಿ20 ಅಧ್ಯಕ್ಷತೆಗಾಗಿ ಅಧಿಕೃತ ಲಾಂಛನವಾಗಿದೆ. ಇದು ಆಘಾತಕಾರಿಯಾಗಿದೆ, ನಾಚಿಕೆಯಿಲ್ಲದೆ ತಮ್ಮನ್ನು ಪ್ರಚಾರ ಮಾಡಿಕೊಳ್ಳುವ ಯಾವುದೇ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕಳೆದುಕೊಳ್ಳುವುದಿಲ್ಲ ಎಂದು ನಮಗೆ ಈಗ ಗೊತ್ತಾಗಿದೆ ’ಎಂದು ರಮೇಶ ಟ್ವೀಟಿಸಿದ್ದಾರೆ. ಇದರ ಬೆನ್ನಿಗೇ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ಅವರು,ನೀವು ಕಮಲನಾಥ ಹೆಸರಿನಿಂದ ಕಮಲವನ್ನು ತೆಗೆಯುತ್ತೀರಾ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಕಮಲವು ನಮ್ಮ ರಾಷ್ಟ್ರೀಯ ಪುಷ್ಪವಾಗಿದೆ. ಅದು ಲಕ್ಷ್ಮೀದೇವಿಯ ಆಸನವೂ ಆಗಿದೆ. ನೀವು ನಮ್ಮ ರಾಷ್ಟ್ರೀಯ ಪುಷ್ಪವನ್ನು ವಿರೋಧಿಸುತ್ತೀರಾ? ನೀವು ಕಮಲನಾಥ ಹೆಸರಿನಿಂದ ಕಮಲವನ್ನು ತೆಗೆಯುತ್ತೀರಾ? ರಾಜೀವ ಎಂದರೂ ಕಮಲವೇ. ಅಲ್ಲಿ ಯಾವುದೇ ಅಜೆಂಡಾವನ್ನು ನೀವು ನೋಡುವುದಿಲ್ಲ ಎಂದು ಆಶಿಸಿದ್ದೇನೆ ’ಎಂದು ಪೂನಾವಾಲಾ ಟ್ವೀಟಿಸಿದ್ದಾರೆ.ಭಾರತವು ಡಿ.10ರಂದು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ.

Similar News