ಮಾಲ್ದೀವ್ಸ್ ಅಗ್ನಿ ಅವಘಡದಲ್ಲಿ ಎಂಟು ಭಾರತೀಯರು ಸೇರಿ 10 ಜನರ ಸಾವು

Update: 2022-11-10 14:24 GMT

ಮಾಲೆ,ನ.10: ಮಾಲ್ದೀವ್ಸ್ (Maldives)ನ ರಾಜಧಾನಿ ಮಾಲೆ(wreath)ಯಲ್ಲಿ ಗುರುವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಎಂಟು ಭಾರತೀಯರು ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ.

ಮಾವೆಯೊ ಮಸೀದಿ ಸಮೀಪದ ಎಂ.ನಿರುಫೆಹಿ(M. Nirufehi) ಪ್ರದೇಶದಲ್ಲಿ ವಿದೇಶಿ ಕಾರ್ಮಿಕರು ವಾಸವಿರುವ ಇಕ್ಕಟ್ಟಾದ ವಸತಿ ಗೃಹದ ಕೆಳ ಅಂತಸ್ತಿನಲ್ಲಿಯ ಗ್ಯಾರೇಜ್ನಲ್ಲಿ ನಸುಕಿನ 12:30ರ ಸುಮಾರಿಗೆ ಈ ದುರಂತ ಸಂಭವಿಸಿದೆ.

‘10 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು,ಈ ಪೈಕಿ ಎಂಟು ಜನರು ಭಾರತೀಯ ಪ್ರಜೆಗಳಾಗಿದ್ದಾರೆ. ಇತರ ಇಬ್ಬರ ರಾಷ್ಟ್ರೀಯತೆಗಳನ್ನು ನಾವಿನ್ನೂ ಖಚಿತಪಡಿಸಿಕೊಳ್ಳಬೇಕಿದೆ ’ಎಂದು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ರಾಮಧೀರ್ ಸಿಂಗ್(Ramdhir Singh) ಸುದ್ದಿಸಂಸ್ಥೆಗೆ ತಿಳಿಸಿದರು.

ಇದಕ್ಕೂ ಮುನ್ನ ಟ್ವೀಟ್ವೊಂದರಲ್ಲಿ ಭಾರತೀಯ ರಾಯಭಾರ ಕಚೇರಿಯು,‘ಎಂಟು ಭಾರತೀಯರು ಸೇರಿದಂತೆ 10 ಜನರು ಮೃತಪಟ್ಟಿರುವ ಮಾಲೆಯಲ್ಲಿನ ಅಗ್ನಿ ದುರಂತವು ನಮಗೆ ನೋವನ್ನುಂಟು ಮಾಡಿದೆ. ನಾವು ಮಾಲ್ದೀವ್ಸ್ನ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ’ಎಂದು ತಿಳಿಸಿತ್ತು.

ಗ್ಯಾರೇಜ್ ನೆಲ ಅಂತಸ್ತಿನಲ್ಲಿದ್ದು,ಮೊದಲ ಅಂತಸ್ತಿನಲ್ಲಿ ವಲಸೆ ಕಾರ್ಮಿಕರು ವಾಸವಿದ್ದಾರೆ. ವಾಸಸ್ಥಳವು ಒಂದೇ ಕಿಟಕಿಯನ್ನು ಹೊಂದಿತ್ತು ಎಂದು ವರದಿಗಳು ತಿಳಿಸಿವೆ.

ಕಟ್ಟಡದಿಂದ 28 ಜನರನ್ನು ತೆರವುಗೊಳಿಸಲಾಗಿದ್ದು,ನಸುಕಿನ 4:30ರ ಸುಮಾರಿಗೆ ಬೆಂಕಿಯನ್ನು ನಂದಿಸಲಾಗಿತ್ತು. ಗಾಯಾಳುಗಳನ್ನು ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಯ ಅಗ್ನಿ ಮತ್ತು ರಕ್ಷಣಾ ಸೇವೆಯು ತಿಳಿಸಿದೆ.

ಸದ್ರಿ ಗ್ಯಾರೇಜ್ ಈ ಹಿಂದೆಯೂ ಎರಡು ಸಲ ಅಗ್ನಿ ಅವಘಡಗಳಿಗೆ ತುತ್ತಾಗಿತ್ತು ಎಂದು ವರದಿಗಳು ತಿಳಿಸಿವೆ.

ಮಾಲೆಯ 2,50,000 ಜನಸಂಖ್ಯೆಯ ಅರ್ಧದಷ್ಟು ವಿದೇಶಿ ಕಾರ್ಮಿಕರಾಗಿದ್ದು,ಹೆಚ್ಚಿನವರು ಭಾರತ,ಬಾಂಗ್ಲಾದೇಶ,ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಸೇರಿದವರಾಗಿದ್ದಾರೆ.

Similar News