ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ. 10 ಮೀಸಲಾತಿಗಾಗಿ ಸಂವಿಧಾನದ ತಿದ್ದುಪಡಿ ವಿರೋಧಿಸಿ ತಮಿಳುನಾಡು ಪಕ್ಷಗಳ ನಿರ್ಣಯ

Update: 2022-11-12 13:19 GMT

ಚೆನ್ನೈ: ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿಗಾಗಿ ಹಾಗೂ ಉದ್ಯೋಗಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10 ಮೀಸಲಾತಿ ನೀಡುವ ಉದ್ದೇಶದಿಂದ ಸಂವಿಧಾನದ 103ನೇ ತಿದ್ದುಪಡಿಯನ್ನು ತಮಿಳುನಾಡಿನ (Tamil Nadu) ರಾಜಕೀಯ ಪಕ್ಷಗಳು ತಿರಸ್ಕರಿಸಿವೆ. ಈ ನಿರ್ಧಾರವನ್ನು ಮುಖ್ಯಮಂತ್ರಿ ಹಾಗೂ ಡಿಎಂಕೆ (DMK) ಅಧ್ಯಕ್ಷ ಎಂ ಕೆ ಸ್ಟಾಲಿನ್ (M K Stalin) ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯನ್ನು ವಿಪಕ್ಷ ಎಐಎಡಿಎಂಕೆ(AIADMK) ಮತ್ತದರ ಮಿತ್ರ ಪಕ್ಷ ಬಿಜೆಪಿ (BJP) ಬಹಿಷ್ಕರಿಸಿವೆ.

ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯ, ವಿವಿಧ ನ್ಯಾಯಾಲಯಗಳ ತೀರ್ಪುಗಳು ವಿರುದ್ಧವಾಗಿ ಹಾಗೂ ಬಡವರ ನಡುವೆ ಜಾತಿ ತಾರತಮ್ಯ ಸೃಷ್ಟಿಸಿದ್ದರಿಂದ ಈ ತಿದ್ದುಪಡಿಯನ್ನು ವಿರೋಧಿಸಲಾಗುತ್ತಿದೆ ಎಂದು ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ತಿಳಿಸಲಾಗಿದೆ.

ಸಭೆಯಲ್ಲಿ ಕಾಂಗ್ರೆಸ್, ಎಡ ಪಕ್ಷಗಳು, ಮರಮಲರ್ಚಿ ದ್ರಾವಿಡ ಮುನ್ನೇತ್ರ ಕಝಗಂ, ವಿದುತ್ತಲೈ ಚಿರುತೈಗಲ್ ಕಚ್ಚಿ ಹಾಗೂ ಎನ್‍ಡಿಎ ಸದಸ್ಯ ಪಟ್ಟಾಲಿ ಮಕ್ಕಳ್ ಕಚ್ಚಿ ಭಾಗವಹಿಸಿದ್ದವು.  ಆರ್ಥಿಕವಾಗಿ ದುರ್ಬಲ ವರ್ಗಗಳವರಿಗೆ ಮೀಸಲಾತಿ ಒದಗಿಸುವ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು.

Similar News