ಮಧುಮೇಹದಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನ: ಡಾ.ಚಂದ್ರಶೇಖರ್
ಉಡುಪಿ: ಭಾರತದಲ್ಲಿ ಪ್ರಸ್ತುತ 8 ಕೋಟಿ ಮಂದಿ ಮಧುಮೇಹ ಹೊಂದಿದ್ದು, 2040ರ ಹೊತ್ತಿಗೆ 13 ಕೋಟಿಗೆ ತಲುಪಿ, ಶೇ.68ರಷ್ಟು ಹೆಚ್ಚಳ ವಾಗಲಿದೆ. ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಚೀನಾ ನಂತರ ಭಾರತವು ಎರಡನೇ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆ. ಇಂದಿನ ದಿನಗಳಲ್ಲಿ ಮಧು ಮೇಹದ ಬಗ್ಗೆ ಹೆಚ್ಚಿನ ಅವಲೋಕನ ನಡೆಯಬೇಕಾಗಿದೆಂದು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಹೇಳಿದ್ದಾರೆ.
ಉಡುಪಿ ಆದರ್ಶ ಚಾರಿಟೇಬಲ್ ಟ್ರಸ್ಟ್, ಆದರ್ಶ ಗ್ರೂಪ್ ಆಫ್ ಇನ್ಸಿಟ್ಯೂಶನ್ಸ್, ಆದರ್ಶ ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಆದರ್ಶ ಆಸ್ಪತ್ರೆಯಲ್ಲಿ ರವಿವಾರ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಸರಿಯಾದ ಆಹಾರ ಕ್ರಮ ಅನುಸರಿಸದೆ, ವ್ಯಾಯಾಮ ಇಲ್ಲದ ಜೀವನ ಶೈಲಿಯಿಂದ ಮಧುಮೇಹ ಹೆಚ್ಚಳಕ್ಕೆ ಕಾರಣವಾಗಿದೆ. ಅನಿಯಮಿತ ಆಹಾರ ಮತ್ತು ತೂಕದ ಮೇಲೆ ನಿಯಂತ್ರಣ ಇಲ್ಲದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆದರ್ಶ ಆಸ್ಪತ್ರೆ ಕಳೆದ 25 ವರ್ಷಗಳಿಂದ ಆರೋಗ್ಯ ಶಿಬಿರ ಹಮ್ಮಿಕೊಂಡು ಸಾರ್ವಜನಿಕರಿಗೆ ಮಧುಮೇಹ, ಕ್ಯಾನ್ಸರ್, ಸಾಂಕ್ರಮಿಕ ರೋಗದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.
ಶಿಬಿರವನ್ನು ಮಾಜಿ ಸಚಿವ ವಿನಯಕುಮಾರ್ ಉದ್ಘಾಟಿಸಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಧೀಶೆ ಶರ್ಮಿಳಾ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಹಿರಿಯ ತಜ್ಞ ವೈದ್ಯ ಪ್ರೊ.ಎ.ರಾಜ, ಆಸ್ಪತ್ರೆಯ ಆಡಳಿತಾಧಿಕಾರಿ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಕಾಶ್ ಬಿ.ಕೆ. ವಂದಿಸಿದರು. ಅನುಷಾ ಆಚಾರ್ಯ ನಿರೂಪಿಸಿದರು. ಶಿಬಿರದಲ್ಲಿ ಮೂತ್ರಪಿಂಡ ಖಾಯಿಲೆ, ನರರೋಗ, ಹೃದ್ರೋಗ, ಕಣ್ಣಿನ ತಪಾಸಣೆ, ರಕ್ತದೊತ್ತಡ, ರಕ್ತದ ಸಕ್ಕರೆ ಅಂಶ, ರಕ್ತದ ಕೊಬ್ಬಿನಾಂಶ, ಇಸಿಜಿ ಸಹಿತ ಮೊದಲಾದ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.