​ಭಾರತದ ಮೊದಲ ಜೀವ ವಿಜ್ಞಾನ ದತ್ತಾಂಶ ಕೋಶ ಆರಂಭ

Update: 2022-11-13 14:59 GMT

ಫರೀದಾಬಾದ (ಹರ್ಯಾಣಾ),ನ.13: ದೇಶದಲ್ಲಿ ಸಾರ್ವಜನಿಕ ಅನುದಾನಿತ ಸಂಶೋಧನೆಗಳಿಂದ ಪಡೆಯಲಾಗಿರುವ ಜೀವ ವಿಜ್ಞಾನ ದತ್ತಾಂಶಗಳಿಗಾಗಿ ಮೊದಲ ರಾಷ್ಟ್ರೀಯ ಕೋಶವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಇತ್ತೀಚಿಗೆ ಇಲ್ಲಿ ಅನಾವರಣಗೊಳಿಸಿದರು.

ಇಲ್ಲಿಯ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಸ್ಥಾಪನೆಯಾಗಿರುವ ‘ಇಂಡಿಯನ್ ಬಯಾಲಾಜಿಕಲ್ ಡಾಟಾ ಸೆಂಟರ್ (ಐಬಿಡಿಸಿ) ’ ನಾಲ್ಕು ಪೆಟಾಬೈಟ್ (10 ಲಕ್ಷ ಜಿಬಿ)ಗಳ ಸಂಗ್ರಹ ಸಾಮರ್ಥ್ಯವನ್ನು ಮತ್ತು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯ ‘ಬ್ರಹ್ಮ’ ವನ್ನು ಹೊಂದಿದೆ.ಭುವನೇಶ್ವರದ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ಡಾಟಾ ಡಿಸಾಸ್ಟರ್ ರಿಕವರಿ ಸೈಟ್‌ನ್ನು ಸ್ಥಾಪಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

ಈವರೆಗೆ ಜೀವ ವಿಜ್ಞಾನ ದತ್ತಾಂಶಗಳನ್ನು ಯುರೋಪ್ ಮತ್ತು ಅಮೆರಿಕದ ದತ್ತಾಂಶ ಕೋಶಗಳಲ್ಲಿ ಸಂಗ್ರಹಿಸಲಾಗುತ್ತಿತ್ತು ಮತ್ತು ದೇಶದೊಳಗೇ ಅಂತಹ ಕೋಶವನ್ನು ಹೊಂದುವುದು ಅಗತ್ಯವಾಗಿತ್ತು ಎಂದು ಐಬಿಡಿಸಿಯ ಕಾರ್ಯಕಾರಿ ನಿರ್ದೇಶಕ ಪ್ರೊ.ಸುಧಾಂಶು ವ್ರತಿ ಹೇಳಿದರು.

ಐಬಿಡಿಸಿಯಲ್ಲಿನ ಕಂಪ್ಯೂಟೇಷನಲ್ ಮೂಲಸೌಕರ್ಯವನ್ನು ಆ ಕ್ಷೇತ್ರದಲ್ಲಿಯ ಸಂಶೋಧಕರಿಗೆ ಲಭ್ಯವಾಗಿಸಲಾಗಿದೆ ಎಂದರು.

Similar News