ರಾಜೀವ್ ಗಾಂಧಿ ಹತ್ಯೆ ಪ್ರಕರಣ: 1991ರ ಸ್ಫೋಟದಲ್ಲಿ ಮೃತಪಟ್ಟವರ ಬಗ್ಗೆ ವಿಷಾದವಿದೆ: ನಳಿನಿ ಶ್ರೀಹರನ್

Update: 2022-11-13 16:46 GMT

ಚೆನ್ನೈ, ನ. 13: ತನಗೆ 1991ರ ಸ್ಫೋಟದಲ್ಲಿ ಮೃತಪಟ್ಟವರ ಬಗ್ಗೆ ವಿಷಾದವಿದೆ ಎಂದು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾಗಿರುವ ದೋಷಿ ನಳಿನಿ ಶ್ರೀಹರನ್ ಅವರು ಶನಿವಾರ ಹೇಳಿದ್ದಾರೆ. 

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ನಳಿನಿ ಶ್ರೀಹರನ್, ರಾಬರ್ಟ್ ಪಾಯಸ್, ಸುತೆಂಥಿರ್ ರಾಜಾ ಆಲಿಯಾಸ್ ಸಂತಾನ್, ಶ್ರೀಹರನ್ ಆಲಿಯಾಸ್ ಮುರುಗನ್, ಜೈಕುಮಾರ್ ಹಾಗೂ ಆರ್.ಪಿ. ರವಿಚಂದ್ರನ್ ಅವರನ್ನು ತಮಿಳುನಾಡಿನ ವಿವಿಧ ಕಾರಾಗೃಹಗಳಿಂದ ಶನಿವಾರ ಸಂಜೆ ಬಿಡುಗಡೆ ಮಾಡಲಾಗಿತ್ತು. ಕಸ್ಟಡಿಯಲ್ಲಿ ತೃಪ್ತಿಕರ ನಡತೆ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ನವೆಂಬರ್ 11ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. 

ಕಾರಾಗೃಹದಿಂದ ಬಿಡುಗಡೆಗೊಂಡ ಬಳಿಕ ನಳಿನಿ ಶ್ರೀಹರನ್, ಆತ್ಮಾಹುತಿ ಬಾಂಬ್ ದಾಳಿಯಿಂದ ಮೃತಪಟ್ಟವರ ಸಂಬಂಧಿಕರು ಆಘಾತದಿಂದ ಹೊರ ಬಂದಿದ್ದಾರೆ ಎಂದು ಭಾವಿಸುತ್ತೇನೆ. ‘‘ಅವರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ.  ಈ ಬಗ್ಗೆ ಚಿಂತಿಸುತ್ತಾ ನಾವು ಹಲವು ವರ್ಷಗಳನ್ನು ಕಳೆದಿದ್ದೇವೆ. ಆದುದರಿಂದ ನಾವು ವಿಷಾದಿಸುತ್ತೇವೆ’’ ಎಂದಿದ್ದಾರೆ. 

ತನ್ನನ್ನು ಬಿಡುಗಡೆಗೊಳಿಸಿದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ನಳಿನಿ ಶ್ರೀಹರನ್ ಕೃತಜ್ಞತೆ ಸಲ್ಲಿಸಿದ್ದಾರೆ. ‘‘ಗಾಂಧಿ ಕುಟುಂಬದ ಯಾರೊಬ್ಬರನ್ನು ಭೇಟಿಯಾಗುವ ಬಗ್ಗೆ ಯೋಚಿಸಿಲ್ಲ’’ ಎಂದು ಅವರು ತಿಳಿಸಿದ್ದಾರೆ. 
‘‘ನನ್ನ ಪತಿ ಎಲ್ಲಿಗೆ ಹೋಗುತ್ತಾರೊ, ಅಲ್ಲಿಗೆ ನಾನು ಹೋಗುತ್ತೇನೆ. ನಾವು ಬೇರೆಯಾಗಿ 32 ವರ್ಷಗಳಾಯ್ತು, ಇನ್ನು ಮುಂದೆ ನನ್ನ ಪತಿಯೊಂದಿಗೆ ಇರುತ್ತೇನೆ’’ ಎಂದು ನಳಿನಿ ಶ್ರೀಹರನ್ ತಿಳಿಸಿದ್ದಾರೆ. 

Similar News