ಹಿಮಾಚಲಪ್ರದೇಶ ಚುನಾವಣೆ: ಖಾಸಗಿ ವಾಹನದಲ್ಲಿ ಇವಿಎಂ ಸಾಗಾಟ; ಕಾಂಗ್ರೆಸ್ ಆರೋಪ

Update: 2022-11-13 17:14 GMT

ರಾಮ್‌ಪುರ (ಹಿಮಾಚಲಪ್ರದೇಶ), ನ. 13: ಇವಿಎಂಗಳನ್ನು ಖಾಸಗಿ ವಾಹನದಲ್ಲಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಚುನಾವಣಾ ಸಿಬ್ಬಂದಿಯನ್ನು ತಡೆದ ಘಟನೆ ಶಿಮ್ಲಾ ಜಿಲ್ಲೆಯ ರಾಮ್‌ಪುರ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ. 

ಇವಿಎಂಗಳನ್ನು ಖಾಸಗಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು ಹಾಗೂ ಚುನಾವಣಾ ಸಿಬ್ಬಂದಿ ಇವಿಎಂಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಗಳು ಚುನಾವಣಾ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿದರು. 

‘‘ಇವಿಎಂಗಳನ್ನು ಖಾಸಗಿ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ನಾವು ಆ ಕಾರನ್ನು ಹಿಂಬಾಲಿಸಿದೆವು. ಪೊಲೀಸರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು’’ ಎಂದು ಕಾಂಗ್ರೆಸ್ ಶಾಸಕ ನಂದ್ ಲಾಲ್ ಅವರು ಹೇಳಿದ್ದಾರೆ. ಘಟನೆ ವರದಿಯಾದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಅಲ್ಲದೆ, ಇವಿಎಂ, ವಿವಿಪಾಟ್‌ಗಳನ್ನು ಸ್ಟ್ರಾಂಗ್ ರೂಮ್‌ಗೆ ರವಾನಿಸಿದರು.

ಚುನಾವಣಾ ಆಯೋಗದ ಅಧಿಕಾರಿಗಳು ಸ್ಟ್ರಾಂಗ್ ರೂಮ್‌ನ ಹೊರಗೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಇವಿಎಂ ಹಾಗೂ ವಿವಿಪಾಟ್‌ಗಳ ಪರಿಶೀಲನೆ ನಡೆಸಿದರು. ಅಲ್ಲದೆ, ಯಂತ್ರಗಳನ್ನು ಸಮರ್ಪಕವಾಗಿ ಮೊಹರು ಮಾಡಲಾಗಿದೆ ಯಾವುದೇ ತಿರುಚುವಿಕೆ   ನಡೆದಿಲ್ಲ ಎಂದು ಭರವಸೆ ನೀಡಿದರು. 

ಇವಿಎಂ ಹಾಗೂ ವಿವಿಪಾಟ್ ಯಂತ್ರಗಳನ್ನು ಕೂಡಲೇ ತಲುಪಿಸಲು ಹಾಗೂ ತಮ್ಮ ಜವಾಬ್ದಾರಿಯಿಂದ ಮುಕ್ತರಾಗಲು ಚುನಾವಣಾ ಸಿಬ್ಬಂದಿ ಖಾಸಗಿ ವಾಹನ ಬಳಸಿದರು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಹಿಮಾಚಲಪ್ರದೇಶದ 68 ವಿಧಾನ ಸಭಾ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು.

Similar News