ಗುಜರಾತ್: ನವ್ಸರಿಯ 18 ಗ್ರಾಮಗಳ ಜನರಿಂದ ಚುನಾವಣೆ ಬಹಿಷ್ಕಾರ
ರಾಮ್‌ಪುರ (ಗುಜರಾತ್), ನ. 13: ಚುನಾವಣೆಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿ ಹಾಗೂ ಆಡಳಿತಾರೂಢ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರಕ್ಕೆ ಗ್ರಾಮಗಳಿಗೆ ಆಗಮಿಸುವುದಕ್ಕೆ ನಿಷೇಧ ವಿಧಿಸಿ ನವ್ಸರಿ ವಿಧಾನ ಸಭಾ ಕ್ಷೇತ್ರದ ಅಂಚೇಲಿ ಹಾಗೂ ಇತರ 17 ಗ್ರಾಮಗಳ ನಿವಾಸಿಗಳು ಬ್ಯಾನರ್‌ಗಳನ್ನು ಹಾಕಿದ್ದಾರೆ.
ಗುಜರಾತ್‌ನಲ್ಲಿ ಮುಂದಿನ ತಿಂಗಳು ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿವೆ. ಈ ನಡುವೆ ಅಂಚೇಲಿ ಹಾಗೂ ಇತರ 17 ಗ್ರಾಮಗಳ ನಿವಾಸಿಗಳು ಈ ಬ್ಯಾನರ್ ಹಾಕಿದ್ದಾರೆ.
ಅಂಚೇಲಿ ರೈಲ್ವೆ ನಿಲ್ದಾಣದಲ್ಲಿ ಲೋಕಲ್ ರೈಲಿಗೆ ನಿಲುಗಡೆ ನೀಡುವ ತಮ್ಮ ಬೇಡಿಕೆ ಈಡೇರದೇ ಇರುವುದೇ ಇಲ್ಲಿನ ನಿವಾಸಿಗಳು ಚುನಾವಣೆ ಬಹಿಷ್ಕರಿಸಲು ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಅಂಚೇಲಿ ರೈಲು ನಿಲ್ದಾಣದ ಸಮೀಪ ಹಾಗೂ ಗ್ರಾಮಗಳಲ್ಲಿ ಹಾಕಲಾಗಿರುವ ಬ್ಯಾನರ್‌ಗಳಲ್ಲಿ ‘‘ರೈಲು ನಿಲ್ಲದಿದ್ದರೆ, ಮತ ಕೂಡ ಇಲ್ಲ. ಬಿಜೆಪಿ ಅಥವಾ ಇತರ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬರ ಬಾರದು. ನಮ್ಮ ಬೇಡಿಕೆ ಈಡೇರಿಲ್ಲ. ಆದುದರಿಂದ ನಾವು ಚುನಾವಣೆ ಬಹಿಷ್ಕರಿಸುತ್ತಿದ್ದೇವೆ’’ ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ ಕಳೆದ 27 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಇದು ಪಕ್ಷದ ಭದ್ರ ಕೋಟೆ ಎಂದೇ ಹೆಸರಾಗಿದೆ. ಆದರೆ, ಕಾಂಗ್ರೆಸ್ ಕೂಡ ಚುನಾವಣಾ ಪ್ರಕ್ರಿಯೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಹಾಗೂ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಬಯಸಿದೆ.
1966ರಿಂದ ಇಲ್ಲಿ ಲೋಕಲ್ ಪ್ಯಾಸೆಂಜರ್ ರೈಲು ಸಂಚಾರ ನಡೆಸುತ್ತಿದೆ. ಆದರೆ, ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅದು ಸಂಚಾರ ನಿಲ್ಲಿಸಿತ್ತು. ಅನಂತರ ಅದು ಮರು ಆರಂಭವಾದ ಬಳಿಕ ನಮ್ಮ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ಕನಿಷ್ಠ 19 ಗ್ರಾಮಗಳ ಜನರು ತಮ್ಮ ಉದ್ಯೋಗ ಹಾಗೂ ದಿನ ಗಳಿಕೆಗೆ ಈ ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ.
ಛೋಟುಭಾ ಪಟೇಲ್, ವಲಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸದಸ್ಯ