ಪ್ರತಿ ರಾಜ್ಯದಲ್ಲಿ ‘ಅಕ್ರಮ ವಲಸಿಗರನ್ನು’ ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಅಧಿಕಾರಿಗಳಿಗೆ ಅಮಿತ್ ಶಾ ನಿರ್ದೇಶನ

Update: 2022-11-14 13:57 GMT

ಹೊಸದಿಲ್ಲಿ,ನ.14: ಪ್ರತಿ ರಾಜ್ಯದಲ್ಲಿಯ ‘ಅಕ್ರಮ ವಲಸಿಗರನ್ನು’ (Illegal Migrants) ಪತ್ತೆ ಹಚ್ಚಿ ಬಂಧಿಸುವಂತೆ ಮತ್ತು ಅವರನ್ನು ಗಡಿಪಾರು ಮಾಡುವಂತೆ ಹಾಗೂ ನೆರೆಯ ದೇಶಗಳು ಅವರನ್ನು ಸ್ವೀಕರಿಸದಿದ್ದರೂ ನಿರ್ದೇಶಿತ ದಾಳಿಗಳನ್ನು ಮುಂದುವರಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಉನ್ನತ ಗುಪ್ತಚರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು thewire.in ವರದಿ ಮಾಡಿದೆ.

ನ.9ರಂದು ಎಲ್ಲ ರಾಜ್ಯಗಳ ಅಧೀನ ಗುಪ್ತಚರ ಘಟಕ (ಎಸ್‌ಐಬಿ)ಗಳೊಂದಿಗೆ ನಡೆಸಿದ ಸಭೆಯಲ್ಲಿ ಶಾ, ಪ್ರತಿ ರಾಜ್ಯದಲ್ಲಿ ಸುಮಾರು 100 ‘ನುಸುಳುಕೋರ’ರನ್ನು ಗುರುತಿಸುವಂತೆ,ಅವರ ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಸಾಧ್ಯವಾದರೆ ಅವರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಬಲ್ಲ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ದೇಶದಲ್ಲಿ ‘ಅಕ್ರಮ ವಲಸಿಗರು’ ಅಥವಾ ‘ನುಸುಳುಕೋರರ ’ಪ್ರವೇಶದ ಕುರಿತು ಶಾ ಎಚ್ಚರಿಕೆ ನೀಡಿರುವುದು ಇದು ಮೊದಲ ಸಲವೇನಲ್ಲ.
ಎನ್‌ಡಿಎ ಸರಕಾರವು ‘ನುಸುಳುಕೋರರನ್ನು’ ಗುರುತಿಸುವ ಮತ್ತು ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಶಾ 2018ರಲ್ಲಿ ಹೇಳಿದ್ದರು.

ಬಳಿಕ 2019ರಲ್ಲಿ ಅಸ್ಸಾಮಿನಲ್ಲಿ ಎನ್‌ಆರ್‌ಸಿಯಿಂದ (NRC) 19 ಲಕ್ಷಕ್ಕೂ ಅಧಿಕ ಜನರು ಹೊರಗುಳಿದ ಬಳಿಕವೂ ಈ ಪ್ರಕ್ರಿಯೆ ದೇಶಾದ್ಯಂತ ಮುಂದುವರಿಯಲಿದೆ ಎಂದು ಶಾ ತಿಳಿಸಿದ್ದರು.

ಎನ್‌ಆರ್‌ಸಿ ಕಾನೂನುಬದ್ಧ ಭಾರತೀಯ ಪ್ರಜೆಗಳ ದಾಖಲೆಯಾಗಿದ್ದು. ಇಂತಹ ದತ್ತಾಂಶ ಕೋಶವನ್ನು ಅಸ್ಸಾಮಿನಲ್ಲಿ ಮಾತ್ರ ನಿರ್ವಹಿಸಲಾಗಿದೆ.

ನ.9ರ ಸಭೆಯಲ್ಲಿ ಪಂಜಾಬಿನಲ್ಲಿ ಸಿಕ್ಖರು ಕ್ರೈಸ್ತಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ಘಟನೆಗಳನ್ನು ಪ್ರಸ್ತಾಪಿಸಿದ್ದ ಶಾ, ಕ್ರೈಸ್ತ ಗುಂಪುಗಳಿಂದ ಧಾರ್ಮಿಕ ಮತಾಂತರಗಳ ಬಗ್ಗೆ ಗಮನ ಹರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯೋರ್ವರು ತಿಳಿಸಿದರು.

ಇದನ್ನೂ ಓದಿ: ವಿದ್ಯುನ್ಮಾನ ಸಾಧನಗಳ ಜಪ್ತಿ ಕುರಿತು ಅರ್ಜಿಗೆ ಉತ್ತರಿಸದ ಕೇಂದ್ರಕ್ಕೆ ದಂಡ ವಿಧಿಸಿದ ಸುಪ್ರೀಂಕೋರ್ಟ್

Similar News