ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ: ಶಾಸಕ ರಘುಪತಿ ಭಟ್

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ

Update: 2022-11-14 15:27 GMT

ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಪಂ, ಉಡುಪಿ ಶಾಲಾ ಶಿಕ್ಷಣ ಮತುತಿ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಅಧೀನ ಸಂಸ್ಥೆಯಾಗಿರುವ ಕಡಿಯಾಳಿ ಯು.ಕಮಲಾ ಬಾಯಿ ಪ್ರೌಢಶಾಲೆ, ಸಹಯೋಗದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಮೂರು ದಿನಗಳ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಕಡಿಯಾಳಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೇಂದ್ರ ಸರಕಾರವು ಕರ್ನಾಟಕ ರಾಜ್ಯದ ಬೆಂಗಳೂರು, ಮಂಡ್ಯ ಹಾಗೂ ಉಡುಪಿ ಜಿಲ್ಲೆಗೆ ಕ್ರೀಡಾ ವಿಜ್ಞಾನ ಕೇಂದ್ರವನ್ನು ಮಂಜೂರು ಮಾಡಿದ್ದು, ಉಡುಪಿಯ ಕೇಂದ್ರವು ಮುಂದಿನ ಎರಡು ತಿಂಗಳೊಳಗೆ ಆರಂಭವಾಗಲಿದೆ ಎಂದು ತಿಳಿಸಿದರು.

ಉಡುಪಿಯಲ್ಲಿ ಆರಂಭವಾಗುವ ಕೇಂದ್ರವು 5 ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಚರಿಸಲಿದೆ. ಕ್ರೀಡಾ ಕ್ಷೇತ್ರಕ್ಕೆ ಬೇಕಾದ ಸೂಕ್ತ ತರಬೇತಿ ಇಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಯು. ವಿಮಲ್ ಕುಮಾರ್ ಮಾತನಾಡಿದರು.

ಕಡಿಯಾಳಿ ಯು.ಕೆ.ಬಿ.ಎಚ್.ಎಸ್. ಇದರ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಪ್ರತಾಪ್ ಕುಮಾರ್, ಉದ್ಯಮಿ ಪುರುಷೋತ್ತಮ್ ಪಿ.ಶೆಟ್ಟಿ, ಡಾ.ವಿನೋದ್ ಕಾಮತ್,  ಬ್ಯಾಡ್ಮಿಂಟನ್ ತರಬೇತುದಾರ  ಯಶ್ ಬೆಂಗಳೂರು, ಸಿಡಿಐ ಅಧಿಕಾರಿ ಶಾಸ್ತ್ರೀ, ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಸುಹೇಲ್, ವರದರಾಜ ಪೈ, ಜಿ.ಎಂ.ವಿದ್ಯಾನಿಕೇತನ ಸ್ಕೂಲ್‌ನ ಪ್ರಕಾಶ್‌ಚಂದ್ರ ಶೆಟ್ಟಿ, ಗೋಪಾಲ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್ ಶೆಣೈ, ಕಿಶೋರ್ ಕುಮಾರ್ ಕಡಿಯಾಳಿ ಉಪಸ್ಥಿತರಿದ್ದರು.

ಯು ಕಮಲಾ ಬಾಯಿ ಪ್ರೌಢಶಾಲೆ ಕಡಿಯಾಳಿ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಸಮಿತಿ ಅಧ್ಯಕ್ಷ ವಿಜಯೇಂದ್ರ ವಸಂತ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್ ವಂದಿಸಿದರು. 

Similar News