ಮಣಿಪಾಲ: ಮಧುಮೇಹ ಆರೋಗ್ಯ ಜಾಗೃತಿ ಕಾರ್ಯಕ್ರಮ

Update: 2022-11-14 16:41 GMT

ಮಣಿಪಾಲ : ಪ್ರತಿವರ್ಷ ನ.14ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ ವಿಭಾಗ ಇಂದು ಬೃಹತ್  ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ  ಶಿಬಿರವನ್ನು ಆಯೋಜಿಸಿತ್ತು. 

ಈ ಬಾರಿಯ ದ್ಯೇಯ ವಾಕ್ಯ ‘ನಾಳೆಯನ್ನು ರಕ್ಷಿಸಲು ಮಧುಮೇಹ  ಶಿಕ್ಷಣ’. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಮಧುಮೇಹ, ರಕ್ತದ ಒತ್ತಡ  ಮತ್ತು ದೈಹಿಕ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಇದೇ ವೇಳೆ ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ ಬಿಡುಗಡೆ ಮಾಡಲಾಯಿತು. 5000 ಕ್ಕೂ ಅಧಿಕ ಜನರು ಈ ಕಾರ್ಯಕ್ರಮಗಳ ಪ್ರಯೋಜನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ಪ್ರೊ ಚಾನ್ಸಲರ್  ಡಾ.ಎಚ್.ಎಸ್.ಬಲ್ಲಾಳ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಭಾರತ ಮಧುಮೇಹದ ರಾಜಧಾನಿಯಾಗಿದ್ದು, ಈ ರೋಗವನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಸಕಾಲದಲ್ಲಿ ಗುರುತಿಸದಿದ್ದರೆ ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. 

ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ ಬಿಡುಗಡೆ ಮಾಡಿ ಮಾತನಾಡಿದ ಮಾಹೆಯ ಕುಲಪತಿ ಲೆ.ಜ. ಡಾ ಎಂ ಡಿ ವೆಂಕಟೇಶ್, ಭಾರತ ದಲ್ಲಿ ಸುಮಾರು 8 ಕೋಟಿ ಜನರು ಮತ್ತು ವಿಶ್ವದಲ್ಲಿ ಸುಮಾರು 60 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ವ್ಯೆದ್ಯಲೋಕದಿಂದ ಮಾತ್ರ ಈ ರೋಗವನ್ನು ತಡೆಗಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದು ಕೊಳ್ಳಬೇಕು ಮತ್ತು ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಉತ್ತಮ ಆರೋಗ್ಯ ದಿನಚರಿಯನ್ನು ಅಭ್ಯಾಸ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್‌ನ ಡೀನ್ ಡಾ. ಅರುಣ್ ಜಿ ಮಯ್ಯ ಮಾತನಾಡಿ ತಮ್ಮ ಕಾಲೇಜು ಹಾಗೂ ಕೆಎಂಸಿ, ಮಧುಮೇಹ ರೋಗಿಗಳ ಮತ್ತು ಪಾದದ ಬಯೋ ಮೆಕಾನಿಕಲ್ ವಿಶ್ಲೇಷಣೆಗಾಗಿ ಸರಳವಾದ ಮೂಲಪ್ರತಿಯೊಂದನ್ನು ಅಭಿವೃದ್ಧಿ ಪಡಿಸಿದೆ. ಇದು ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಲು ಸಹಾಯ ಮಾಡುತ್ತದೆ ಎಂದರು.

ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕುಮಾರ್ ಕೆ ರಾವ್ ಸ್ವಾಗತಿಸಿದರು. ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ವಂದಿಸಿದರು. ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಧುಮೇಹ ಕುರಿತ ಪೋಸ್ಟರ್ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Similar News