ಶ್ರದ್ಧಾ ಕೊಲೆ ಪ್ರಕರಣ: ಅರಣ್ಯ ಪ್ರದೇಶಕ್ಕೆ ಆರೋಪಿಯನ್ನು ಕರೆದೊಯ್ದ ಪೊಲೀಸ್;‌ 10 ಕ್ಕೂ ಅಧಿಕ ಅಂಗಾಂಗಗಳು ಪತ್ತೆ

Update: 2022-11-15 14:21 GMT

ಹೊಸದಿಲ್ಲಿ: 26 ವರ್ಷದ ಶ್ರದ್ಧಾ ವಾಲ್ಕರ್ ಅವರ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಫ್ರಿಡ್ಜ್ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಲು ಸಿಬಿಐನ ವಿಧಿವಿಜ್ಞಾನ ತಂಡ ಇಂದು ದಿಲ್ಲಿಯ ಮೆಹ್ರೌಲಿ ಪೊಲೀಸ್ ಠಾಣೆಗೆ ತಲುಪಿದೆ. ಇದುವರೆಗಿನ ಪೊಲೀಸ್ ತನಿಖೆಯಿಂದ ಪ್ರಕರಣದ ಭಯಾನಕ ವಿವರಗಳು ಬೆಳಕಿಗೆ ಬಂದಿವೆ ಎಂದು ndtv.com ವರದಿ ಮಾಡಿದೆ.

ದಿಲ್ಲಿ ಪೊಲೀಸರು ಇಂದು ಆರೋಪಿ ಅಫ್ತಾಬ್‌ನನ್ನು ಶ್ರದ್ಧಾಳ ದೇಹದ ಭಾಗಗಳನ್ನು ಎಸೆದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ   ಮೂರು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆದಿದ್ದು, ಕನಿಷ್ಠ 10 ದೇಹದ ಭಾಗಗಳನ್ನು ಪತ್ತೆ ಮಾಡಲಾಗಿದೆ.

ಸಂತ್ರಸ್ತೆಯ ತಂದೆ ವಿಕಾಸ್ ವಾಕರ್ ಮಂಗಳವಾರ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಅಫ್ತಾಬ್ ಮತ್ತು ಶ್ರದ್ಧಾ ಇಬ್ಬರೂ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಡೇಟಿಂಗ್ ಅಪ್ಲಿಕೇಶನ್ "ಬಂಬಲ್" ಮೂಲಕ ಪರಿಚಿತರಾಗಿದ್ದರು. ಲಿವಿಂಗ್‌ ರಿಲೇಶನ್‌ಶಿಪ್‌ ನಲ್ಲಿದ್ದ ಶ್ರದ್ಧಾ ಮದುವೆಗೆ ಒತ್ತಾಯಿಸಿದ್ದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ವರದಿಯಾಗಿದೆ. ಆದರೆ ಮೇ 18 ರಂದು ಅವರ ಜಗಳ ಉಲ್ಬಣಗೊಂಡಿದ್ದು, ಅಫ್ತಾಬ್‌ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಮೃತದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ, ಶುದ್ಧೀಕರಿಸಲು "ಸಲ್ಫರ್ ಹೈಪೋಕ್ಲೋರೈಟ್" ಅನ್ನು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಹವನ್ನು ಕತ್ತರಿಸಿದ ಅದೇ ಕೋಣೆಯಲ್ಲಿ ಅಫ್ತಾಬ್ ಮಲಗಿದ್ದ ಎಂದು ಮೂಲಗಳು ತಿಳಿಸಿವೆ. ಫ್ರಿಡ್ಜ್‌ನಲ್ಲಿಟ್ಟ ನಂತರ ಮೃತದೇಹದ ಭಾಗಗಳನ್ನು ಪದೇ ಪದೇ ಆರೋಪಿ ತೆರೆದು ಪರಿಶೀಲಿಸುತ್ತಿದ್ದ, ಹಾಗೂ ಕೆಲವು ಭಾಗಗಳನ್ನು ಸರಣಿಯಾಗಿ ವಿಲೇವಾರಿ ಮಾಡುತ್ತಿದ್ದ ಎಂದೂ ವರದಿಯಾಗಿದೆ.

ಶ್ರದ್ಧಾ ಮೃತದೇಹವನ್ನು ಕತ್ತರಿಸಲು ಬಳಸಿದ ಉಪಕರಣಗಳನ್ನು ಖರೀದಿಸಿದ ಅಂಗಡಿಗೆ ಪೊಲೀಸರು ಆರೋಪಿಯನ್ನು ಕರೆದೊಯ್ದರು ಪರಿಶೀಲನೆ ನಡೆಸಿದ್ದರಾದರೂ, ಆ ದಿನದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರೆತಿಲ್ಲ.

ಕೊಲೆಯಾದ ಕೆಲವೇ ದಿನಗಳಲ್ಲಿ ಅಫ್ತಾಬ್ ತನ್ನ ಅಪಾರ್ಟ್‌ಮೆಂಟ್‌ಗೆ ಮತ್ತೊಬ್ಬ ಮಹಿಳೆಯನ್ನು ಕರೆತಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  

ಅಫ್ತಾಬ್ ಅಮೀನ್ ಪೂನಾವಾಲಾ ಮೇ 18 ರಂದು ಆಕೆಯನ್ನು ಕೊಲೆ ಮಾಡಿ, ಮರುದಿನ ಆಕೆಯ ದೇಹವನ್ನು ಇಡಲು 300 ಲೀಟರ್ ಫ್ರಿಡ್ಜ್ ಖರೀದಿಸಿ, ಅದೇ ದಿನ ಆಯುಧವನ್ನು ಪಡೆದುಕೊಂಡು ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಂತರ ಪ್ರತಿದಿನ ತಡರಾತ್ರಿ ಅರಣ್ಯ ಪ್ರದೇಶದಲ್ಲಿ ಎಸೆದು ಬರುತ್ತಿದ್ದನು. ಆರೋಪಿಗೆ ಕ್ರೈಮ್‌ ಥ್ರಿಲ್ಲರ್‌ ಸೀರೀಸ್‌ ಗಳನ್ನು ನೋಡುವ ಚಟವಿದ್ದು, ಸೀರೀಸ್‌ ಒಂದರಿಂದ ಪ್ರಭಾವಿತಗೊಂಡು ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದನು ಎಂದು ವರದಿಗಳು ಹೇಳಿವೆ.

Similar News