ಆಧುನಿಕ ಮತ್ತು ಸಮಾನ ನ್ಯಾಯಾಂಗ ಅಗತ್ಯವಿದೆ: ಸಿಜೆಐ ಚಂದ್ರಚೂಡ್
ಹೊಸದಿಲ್ಲಿ,ನ.15: ಜಿಲ್ಲಾ ನ್ಯಾಯಾಂಗವನ್ನು ಅಧೀನ ಎಂದು ನೋಡದೆ ಸಮಾನವಾಗಿ ಪರಿಗಣಿಸುವ ಆಧುನಿಕ ಮತ್ತು ಸಮಾನ ನ್ಯಾಯಾಂಗವನ್ನು ಹೊಂದುವುದು ತನ್ನ ಧ್ಯೇಯವಾಗಿದೆ ಹಾಗೂ ಸರ್ವೋಚ್ಚ ನ್ಯಾಯಾಲಯ(Supreme Court)ದ ಕಾರ್ಯವನ್ನು ಹೆಚ್ಚು ಪಾರದರ್ಶಕ ಮತ್ತು ವಸ್ತುನಿಷ್ಠಗೊಳಿಸಲು ತಂತ್ರಜ್ಞಾನವನ್ನು ಬಳಸಬಹುದು ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಡಿ.ವೈ.ಚಂದ್ರಚೂಡ್ (DY Chandrachud)ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೋಮವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಕೀಲರೊಂದಿಗಿನ ತನ್ನ ಮೊದಲ ಅಧಿಕೃತ ಸಂವಾದದಲ್ಲಿ ದೇಶದಲ್ಲಿಯ ಜಿಲ್ಲಾ ನ್ಯಾಯಾಧೀಶರು ಎದುರಿಸುತ್ತಿರುವ ಕಠೋರ ವಾಸ್ತವಗಳ ಕುರಿತು ಮಾತನಾಡಿದ ನ್ಯಾ.ಚಂದ್ರಚೂಡ್ ಅವರು,‘ನಾವು ಆಧುನಿಕ ಮತ್ತು ಸಮಾನ ನ್ಯಾಯಾಂಗದತ್ತ ಸಾಗುವ ಅಗತ್ಯವಿದೆ ’ಎಂದು ಹೇಳಿದರು.
ನಾವು ಬದಲಾಗಬೇಕಾದರೆ ನಾವು ಮೊಟ್ಟಮೊದಲು ಜಿಲ್ಲಾ ನ್ಯಾಯಾಂಗದ ಸ್ವರೂಪವನ್ನು ಬದಲಿಸಬೇಕು. ಸಾಮಾನ್ಯವಾಗಿ ‘ಅಧೀನ ನ್ಯಾಯಾಂಗ’ ಎಂಬ ಅಭಿವ್ಯಕ್ತಿಯನ್ನು ‘ವಸಾಹತುಶಾಹಿ ಮನಃಸ್ಥಿತಿ ’ಯ ಭಾಗವಾಗಿ ಜಿಲ್ಲಾ ನ್ಯಾಯಾಂಗವನ್ನು ಉಲ್ಲೇಖಿಸುವಾಗ ಬಳಸಲಾಗುತ್ತಿತ್ತು.
ಸಿಜೆ ಐ ವೈ.ವಿ.ಚಂದ್ರಚೂಡ್
‘ನಾವು ಅಧೀನತೆಯ ಸಂಸ್ಕೃತಿಯನ್ನು ಬೆಳೆಸಿದ್ದೇವೆ. ಅತ್ಯಂತ ಮುಖ್ಯವಾಗಿರುವ ನಮ್ಮ ಜಿಲ್ಲಾ ನ್ಯಾಯಾಂಗದ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ನಾವು ಬಹಳಷ್ಟನ್ನು ಮಾಡಬೇಕಿದೆ ಮತ್ತು ಇದಕ್ಕಾಗಿ ಇಂದೇ ಬುನಾದಿಯನ್ನು ಹಾಕಬೇಕಿದೆ. ಇದು ಮಾತ್ರವಲ್ಲ,ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಾಗಿ ನಾವು ನಮ್ಮ ಜಿಲ್ಲಾ ನ್ಯಾಯಾಂಗವನ್ನು ಹೇಗೆ ನೋಡುತ್ತೇವೆ ಮತ್ತು ಅವುಗಳನ್ನು ಹೇಗೆ ಗ್ರಹಿಸುತ್ತೇವೆ ಎಂಬ ಬಗ್ಗೆಯೂ ನಮ್ಮ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ ’ಎಂದರು.
ಈ ನಿಟ್ಟಿನಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಹೋಲಿಸಿದ ನ್ಯಾ.ಚಂದ್ರಚೂಡ್, ಕಿರಿಯ ಐಎಎಸ್ ಅಧಿಕಾರಿ ತನ್ನ ಹಿರಿಯ ಅಧಿಕಾರಿಯೊಂದಿಗೆ ವ್ಯವಹರಿಸುವಾಗ ಕೀಳರಿಮೆಯನ್ನು ಹೊಂದಿರುವುದಿಲ್ಲ. ಆದರೆ ನ್ಯಾಯಾಂಗದಲ್ಲಿ ಹೀಗಿಲ್ಲ ಎಂದರು. ಉಚ್ಚ ನ್ಯಾಯಾಲಯದ ಅಧಿಕಾರಿಗಳು ಊಟಕ್ಕಾಗಿ ಟೇಬಲ್ನೆದುರು ಕುಳಿತಾಗ ಜಿಲ್ಲಾ ನ್ಯಾಯಾಧೀಶರು ನಿಂತುಕೊಳ್ಳುವುದು ಮತ್ತು ಅವರಿಗೆ ಆಹಾರವನ್ನು ಬಡಿಸುವುದೂ ಸಂಪ್ರದಾಯವಾಗಿದ್ದ ಕೆಲವು ನಿದರ್ಶನಗಳನ್ನು ಅವರು ಪ್ರಸ್ತಾಪಿಸಿದರು.
ತಾನು ಆಡಳಿತಾತ್ಮಕ ನ್ಯಾಯಾಧೀಶನಾಗಿದ್ದಾಗ ಜಾಗ್ರತ ಪ್ರಕರಣಗಳ ವಿಷಯಗಳಲ್ಲಿ ತನಗೆ ಮಾಹಿತಿ ನೀಡಲು ಬರುತ್ತಿದ್ದ ಜಿಲ್ಲಾ ನ್ಯಾಯಾಧೀಶರು ನಿಂತೇ ಇರುವುದನ್ನು ತಾನು ಗಮನಿಸಿದ್ದೆ ಎಂದು ಮೆಲುಕು ಹಾಕಿದ ನ್ಯಾ.ಚಂದ್ರಚೂಡ್,‘ಆಗ ನಾನು ಸಂಪ್ರದಾಯವನ್ನು ಮುರಿಯುತ್ತಿದ್ದೆ ಮತ್ತು ನೀವು ನಮ್ಮೆಂದಿಗೆ ಟೇಬಲ್ನಲ್ಲಿ ಕುಳಿತುಕೊಳ್ಳದಿದ್ದರೆ ನಾನು ಯಾವುದೇ ಚರ್ಚೆಯನ್ನು ನಡೆಸುವುದಿಲ್ಲ ಅಥವಾ ಆಹಾರವನ್ನೂ ಸೇವಿಸುವುದಿಲ್ಲ ಎಂದು ಅವರಿಗೆ ಹೇಳುತ್ತಿದ್ದೆ ’ ಎಂದರು.
ಉಚ್ಚ ನ್ಯಾಯಾಲಯವೊಂದರ ಮುಖ್ಯ ನ್ಯಾಯಾಧೀಶರು ರಾಜ್ಯಗಳಿಗೆ ಭೇಟಿ ನೀಡಲಿದ್ದರೆ ರಾಜ್ಯದ ಗಡಿಯ ಆಗಮನ ಮತ್ತು ನಿರ್ಗಮನ ತಾಣಗಳಲ್ಲಿ ಜಿಲ್ಲಾ ನ್ಯಾಯಾಧೀಶರು ಉಪಸ್ಥಿತರಿರಬೇಕಿದ್ದ ನಿದರ್ಶನವನ್ನು ಹಂಚಿಕೊಂಡ ಅವರು,ಇವೆಲ್ಲವೂ ಬದಲಾಗಬೇಕಿದೆ. ‘ನಮ್ಮ ಜಿಲ್ಲಾ ನ್ಯಾಯಾಂಗದಲ್ಲಿ ಸ್ವಾಭಿಮಾನದ ಪ್ರಜ್ಞೆಯನ್ನು ನಾವು ಮೈಗೂಡಿಸಬೇಕಿದೆ ’ಎಂದರು. ಜಿಲ್ಲಾ ನ್ಯಾಯಾಂಗವು ಮುಖ್ಯವಾಗಿದೆ ಮತ್ತು ನಮ್ಮ ನ್ಯಾಯಾಂಗ ವ್ಯವಸ್ಥೆಯ ಬುನಾದಿಯಾಗಿದೆ ಎನ್ನುವುದನ್ನು ಮೊದಲು ಅರಿತುಕೊಳ್ಳುವಂತೆ ನ್ಯಾ.ಚಂದ್ರಚೂಡ್ ಅವರು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ಕೇಳಿಕೊಂಡರು.
ಸಮಾನತೆಯೊಂದಿಗೆ ಮಾತನಾಡುವ ಯುವ ನ್ಯಾಯಾಧೀಶರು ನ್ಯಾಯಾಂಗಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ,ಜೊತೆಗೆ ನ್ಯಾಯಾಂಗ ಸೇವೆಯಲ್ಲಿ ಹೆಚ್ಚಿನ ಮಹಿಳೆಯರ ಆಗಮನದೊಂದಿಗೆ ಪರಿಸ್ಥಿತಿ ಬದಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.