ಕೇರಳದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ನಾಶಕ್ಕಾಗಿ ಕೇಂದ್ರದಿಂದ ರಾಜಭವನ ಬಳಕೆ: ಸೀತಾರಾಂ ಯೆಚೂರಿ

Update: 2022-11-15 15:38 GMT

ತಿರುವನಂತಪುರ,ನ.15: ವಿವಿಗಳಲ್ಲಿ ತಮ್ಮ ಸಿದ್ಧಾಂತವನ್ನು ಹೇರಲು ಸಂಘ ಪರಿವಾರ ಸಂಘಟನೆಗಳು ರಾಜ್ಯಪಾಲರ ಕಚೇರಿಯನ್ನು ಬಳಸುತ್ತಿವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ (Sitarama Yechury)ಅವರು ಮಂಗಳವಾರ ಇಲ್ಲಿ ಆರೋಪಿಸಿದರು.

ಆಡಳಿತಾರೂಢ ಎಲ್ಡಿಎಫ್ನ ಸಹಸ್ರಾರು ಕಾರ್ಯಕರ್ತರಿಂದ ರಾಜಭವನಕ್ಕೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಯೆಚೂರಿ,ಉನ್ನತ ಶಿಕ್ಷಣ ಕ್ಷೇತ್ರಗಳು ವೈಜ್ಞಾನಿಕ ಮನೋಧರ್ಮ,ಮಾನವತಾವಾದ ಮತ್ತು ಸಹಿಷ್ಣುತೆಗೆ ಪ್ರತೀಕವಾಗಿವೆ,ಆದರೆ ದೇಶವನ್ನು ಸಮಗ್ರ ’ಹಿಂದು ರಾಷ್ಟ್ರ’('Hindu Nation')ವನ್ನಾಗಿಸಲು ಇವು ಪೂರಕವಲ್ಲ. ಹೀಗಾಗಿ ಕೇಸರಿ ಶಕ್ತಿಗಳು ರಾಜಭವನವನ್ನು ಬಳಸಿಕೊಳ್ಳುವ ಮೂಲಕ ಅವುಗಳನ್ನು ಗುರಿಯಾಗಿಸಿಕೊಳ್ಳುತ್ತಿವೆ ಎಂದರು.

 ‘ಹಿಂದು ರಾಷ್ಟ್ರ’ದಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಮುಕ್ತ ಚಿಂತನೆಗೆ ಅವಕಾಶವಿಲ್ಲ. ಇದೇ ಕಾರಣದಿಂದ ಸಂಘ ಪರಿವಾರ ಶಕ್ತಿಗಳು ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿವೆ ಎಂದ ಅವರು,ನಾಝಿಗಳೂ ಹೀಗೆಯೇ ಜರ್ಮನಿಯನ್ನು ಪರಿವರ್ತಿಸಿದ್ದರು. ಹಿಟ್ಲರ್ ಸಾರ್ವಜನಿಕ ಭಾಷಣದಲ್ಲಿ ತಾರ್ಕಿಕತೆ ಮತ್ತು ವೈಚಾರಿಕತೆಯನ್ನು ನಾಶಗೊಳಿಸಿದ್ದ. ಪ್ರತಿಯೊಂದನ್ನೂ ಕುರುಡು ನಂಬಿಕೆ ಮತ್ತು ವ್ಯಕ್ತಿ ಆರಾಧನೆ ಮಟ್ಟಕ್ಕೆ ಇಳಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ದಾಳಿ ನಡೆಸುವ ಮೂಲಕ ಇದನ್ನೇ ಮಾಡುತ್ತಿದ್ದಾರೆ ಎಂದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ಎಲ್ಡಿಎಫ್ ಕಾರ್ಯಕರ್ತರು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ (Arif Muhammad Khan)ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರು ಉನ್ನತ ಶಿಕ್ಷಣ ಕ್ಷೇತ್ರವನ್ನು ನಾಶಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Similar News