×
Ad

‌ಶಿವಸೇನೆಯ ಹೆಸರು, ಚಿಹ್ನೆಯ ಮೇಲಿನ ಹಕ್ಕು ಮಂಡನೆಗೆ ದಾಖಲೆ ಒದಗಿಸಲು ಚುನಾವಣಾ ಆಯೋಗ ಸೂಚನೆ

Update: 2022-11-16 19:45 IST

ಹೊಸದಿಲ್ಲಿ,ನ.16: ಶಿವಸೇನಾ ಪಕ್ಷ(Shiv Sena party)ದ  ಹೆಸರು ಹಾಗೂ ಚಿಹ್ನೆಗಳ ಮೇಲೆ ತಮ್ಮ ಹಕ್ಕನ್ನು ಮಂಡಿಸಲು  ನವೆಂಬರ್ 23ರೊಳಗೆ ಪೂರಕ ದಾಖಲೆಗಳನ್ನು ಒದಗಿಸುವಂತೆ  ಚುನಾವಣಾ ಆಯೋಗವು ಬುಧವಾರ ಉದ್ಧವ್ಠಾಕ್ರೆ  ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ(Eknath Shinde) ನೇತೃತ್ವದ ಉಭಯ ಬಣಗಳಿಗೆ ಸೂಚನೆ ನೀಡಿದೆ.

ದಾಖಲೆಗಳು ಸಲ್ಲಿಕೆಯಾದ ಬಳಿಕ  ಎರಡೂ ಬಣಗಳ ಅಹವಾಲುಗಳ ಅಲಿಕೆಗೆ ದಿನಾಂಕವನ್ನು ನಿಗದಿಪಡಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

 ಶಿವಸೇನಾ ಪಕ್ಷದ ಹೆಸರು ಹಾಗೂ ಚುನಾವಣಾ ಚಿಹ್ನೆಯಾದ ಬಿಲ್ಲು ಬಾಣವನ್ನು  ಸ್ತಂಭನಗೊಳಿಸುವ ಚುನಾವಣಾ ಆಯೋಗದ ಮಧ್ಯಂತರ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ಬಣ  ಸಲ್ಲಿಸಿದ ಅರ್ಜಿಯನ್ನು  ದಿಲ್ಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಚುನಾವಣಾ ಆಯೋಗದ ಅರ್ಜಿಯನ್ನು ಅತ್ಯಂತ ತ್ವರಿತವಾಗಿ ನಿರ್ಧರಿಸುವಂತೆಯೂ ಚುನಾವಣಾ ಆಯೋಗವು ಹೈಕೋರ್ಟ್ಗೆ ತಿಳಿಸಿದೆ.

ಈ ವರ್ಷದ ಜೂನ್ನಲ್ಲಿ ಏಕನಾಥ ಶಿಂಧೆ ಹಾಗ ಶಿವಸೇನಾದ  ಶಾಸಕರ ಗುಂಪೊಂದು ಉದ್ಧವ್ಠಾಕ್ರೆ ನೇತೃತ್ವದ ಮಹಾವಿಕಾಸ್ ಆಗಾಡಿ ಮೈತ್ರಿಸರಕಾರದ ವಿರುದ್ಧ ಬಂಡೆದ್ದ ಬಳಿಕ ಶಿವಸೇನಾವು ಎರಡು ಬಣಗಳಾಗಿ ವಿಭಜಿತವಾಗಿತ್ತು.

ಸುಮಾರು ಒಂದು ವಾರದ ರಾಜಕೀಯ  ವಿದ್ಯಮಾನಗಳ ಬಳಿಕ, ಉದ್ಧವ್ ಬಣವು ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿದ್ದರಿಂದ ಅಧಿಕಾರ ತ್ಯಜಿಸಿತು. ಜೂನ್ 30 ಬಿಜೆಪಿಯ ಬೆಂಬಲದೊಂದಿಗೆ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸಿದ್ದರು.

ಆಕ್ಟೋಬರ್ 10ರಂದು ಚುನಾವಣಾ ಆಯೋಗವು ದೊಂದಿಯ ಚಿಹ್ನೆಯನ್ನು ಠಾಕ್ರೆ ನೇತೃತ್ವದ ಬಣಕ್ಕೆ ವಿತರಿಸಿತ್ತು ಹಾಗೂ ಅದಕ್ಕೆ ಶಿವಸೇನಾ (ಉದ್ಧವ್ ಬಾಳಾ ಸಾಹೇಬ್ಠಾಕ್ರೆ) ಎಂದು ಮಾನ್ಯತೆ ನೀಡಿತು. ಶಿಂಧೆ ಬಣಕ್ಕೆ ಎರಡು ಖಡ್ಗ ಹಾಗೂ ಗುರಾಣಿಯ ಚಿಹ್ನೆಯನ್ನು ನೀಡಿತು ಹಾಗೂ ಆ ಬಣವು ‘ಬಾಳಾಸಾಹೇಬಾಚಿ ಶಿವಸೇನಾ’ ಎಂದು ನಾಮಕರಣ ಮಾಡಿತ್ತು

Similar News