ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಯಲ್ಲಿ ಕಳ್ಳತನ: ನಾಲ್ವರು ಅಂತರ್ ರಾಜ್ಯ ಕಳವು ಆರೋಪಿಗಳ ಬಂಧನ
ಉಡುಪಿ : ಶಿರ್ವ ಹಾಗೂ ಮೂಡಬಿದ್ರಿಯ ಜ್ಯುವೆಲ್ಲರಿಗಳಲ್ಲಿ ನಡೆದ ಚಿನ್ನಾಭರಣ ಕಳವಿಗೆ ಸಂಬಂಧಿಸಿ ನಾಲ್ವರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯ ಶನಾಬೆಲ್ಲಾ ಬಿ.(45), ಮುಹಮ್ಮದ್ ಅಲಿ(32), ಅಶುರ್ ಅಲಿ(32) ಹಾಗೂ ಗಣೇಶ್ ಕುಮಾರ್ (40) ಬಂಧಿತ ಆರೋಪಿಗಳು.
ಬಂಧಿತರಿಂದ 1.49 ಲಕ್ಷ ರೂ. ಮೌಲ್ಯದ 28.882 ಗ್ರಾಂ ತೂಕದ ಚಿನ್ನದ ಗಟ್ಟಿ ಮತ್ತು 1.17ಲಕ್ಷ ರೂ. ಮೌಲ್ಯದ 26 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂ.6ರಂದು ಮಧ್ಯಾಹ್ನ ಶಿರ್ವ ಪೇಟೆಯ ಕೃಪಾ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತರು, ಅಂಗಡಿಯ ಕೆಲಸದವರಿಗೆ ತಿಳಿಯದಂತೆ 1.49 ಲಕ್ಷ ರೂ. ಮೌಲ್ಯದ 28.799 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಕಳವು ಮಾಡಿಕೊಂಡು ಹೋಗಿದ್ದರು. ಜೂ.9ರಂದು ಸಿಸಿ ಕ್ಯಾಮೆರಾ ಪರಿಶೀಲಿಸಿ ದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿವೇಕಾನಂದ ಆಚಾರ್ಯ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಆರೋಪಿಗಳ ವಿರುದ್ಧ ಮೂಡಬಿದ್ರಿಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಡುಪಿ ಎಸ್ಪಿ ಅಕ್ಷಯ್ ಹಾಕೇ, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಹಾಗೂ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಪೂವಯ್ಯ ಕೆ.ಸಿ. ನೇತೃತ್ವದಲ್ಲಿ ಶಿರ್ವ ಎಸ್ಸೈ ರಾಘವೇಂದ್ರ ಸಿ., ಎಎಸ್ಸೈ ವಿವೇಕಾನಂದ ಬಿ., ಸಿಬ್ಬಂದಿಗಳಾದ ಕಿಶೋರ್ ಕುಮಾರ್, ರಘು, ಅಖಿಲ್, ಶಿವಾನಂದ ಪೂಜಾರಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.