ಬ್ರಿಟೀಷರಲ್ಲಿ ಕ್ಷಮೆಯಾಚಿಸಿ ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಬಗೆದಿದ್ದಾರೆ: ರಾಹುಲ್‌ ಗಾಂಧಿ

"ಸಾವರ್ಕರ್‌ ಆಂಗ್ಲರಿಗೆ ಭಯಬಿದ್ದು, ಅವರಿಗೆ ಸಹಾಯ ಮಾಡಿದ್ದಾರೆ"

Update: 2022-11-17 14:07 GMT

ಅಕೋಲಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹಿಂದುತ್ವವಾದಿ ವಿಡಿ ಸಾವರ್ಕರ್ ರನ್ನು ಗುರಿಯಾಗಿಸುವುದನ್ನು ಮುಂದುವರೆಸಿದ್ದು, ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ ಹಾಗೂ ಭಯದಿಂದ ಬ್ರಿಟೀಷರಲ್ಲಿ ಕ್ಷಮಾದಾನ ಕೋರಿ ಅರ್ಜಿಯನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.

ಅಕೋಲಾ ಜಿಲ್ಲೆಯ ವಡೇಗಾಂವ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 1920 ರ ಹಿಂದಿನ ಸರ್ಕಾರಿ ದಾಖಲೆಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ್ದು, ಅದರಲ್ಲಿ ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವಿದೆ ಎಂದು ಪ್ರತಿಪಾದಿಸಿದ್ದಾರೆ.

"ನಾನು ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಉಳಿಯಲು ಬೇಡಿಕೊಳ್ಳುತ್ತೇನೆ" ಎಂದು ವಿಡಿ ಸಾವರ್ಕರ್ ಹೇಳುವ ಕೊನೆಯ ಸಾಲನ್ನು ನಾನು ಓದುತ್ತೇನೆ. ಇದರಲ್ಲಿ ಸಾವರ್ಕರ್‌ ಸಹಿ ಹಾಕಿದ್ದಾರೆ, ಇದು ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ ಎಂದು ತೋರಿಸುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಾವರ್ಕರ್ ಅವರು ಭಯದಿಂದ ಪತ್ರಕ್ಕೆ ಸಹಿ ಹಾಕಿದ್ದಾರೆ ಮತ್ತು ಹಾಗೆ ಮಾಡುವ ಮೂಲಕ ಅವರು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರು ಮತ್ತು ಸ್ವಾತಂತ್ರ್ಯ ಹೋರಾಟದ ಇತರ ನಾಯಕರಿಗೆ ದ್ರೋಹ ಮಾಡಿದ್ದಾರೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ, ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಯವರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ ಎಂದು ಶಿವಸೇನಾ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

Similar News