×
Ad

ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-11-17 19:52 IST

ಉಡುಪಿ: ಸಾರ್ವಜನಿಕರ ಸೇವೆಯಲ್ಲಿ ಪ್ರತಿದಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಒತ್ತಡ ನಿವಾರಣೆಗೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ.

ಗುರುವಾರ ನಗರದ ಅಜ್ಜರಕಾಡಿನ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸರು ಪ್ರತಿದಿನ ಯಾವುದಾದರೊಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ, ಕರ್ತವ್ಯದ ಅವಧಿಯಲ್ಲಿ ಹೆಚ್ಚಿನ ಉತ್ಸಾಹದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಜೊತೆಗೆ ಒತ್ತಡ ರಹಿತ, ಆರೋಗ್ಯ ಕರ ಜೀವ ನಡೆಸಲು ಸಾಧ್ಯವಾಗಲಿದೆ. ಅಲ್ಲದೆ  ಕ್ರೀಡಾಕೂಟಗಳಲ್ಲಿ ಭಾಗವಹಿ ಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಈ ಬಾರಿಯ ಕ್ರೀಡಾಕೂಟದಲ್ಲಿ ೫೦ ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಿರುವುದರ ಜೊತೆಗೆ ಪೊಲೀಸ್‌ಅಪರಾಧ ಪತ್ತೆ ವಿಭಾಗ ಮತ್ತು ಡಿಎಆರ್ ಸಿಬ್ಬಂದಿಗಳಿಗೆ ವಿಶೇಷ ಸ್ಪರ್ಧೆ ಹಾಗೂ ಕೆಸರುಗದ್ದೆ ಓಟದಂತಹ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದೆ. ಈ ಕ್ರೀಡಾಕೂಟದ ಮೂಲಕ ಪೊಲೀಸ್ ಸಿಬ್ಬಂದಿ ತಮ್ಮ ಒತ್ತಡವನ್ನು ಮರೆತು, ಕ್ರೀಡಾ ಸ್ಪೂರ್ತಿಯಿಂದ ಹಾಗೂ ಹೆಚ್ಚಿನ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.

ಕ್ರೀಡಾ ತಂಡಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ವಂದನೆ ಸ್ವೀಕಾರ ನಡೆಯಿತು. ಡಿಎಆರ್‌ನ ಜೀವನ್ ಕ್ರೀಡಾಜ್ಯೋತಿಯೊಂದಿಗೆ ಆಗಮಿಸಿದರು. ಡಿಎಆರ್ ಸಬ್‌ಇನ್ಸ್‌ಪೆಕ್ಟರ್ ಅದರ್ಶ ದೇವಣ್ಣ ನಾಯಕನ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಸ್ವಾಗತಿಸಿ ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ಎಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ವಂದಿಸಿದರು. 

ಉಡುಪಿ, ಕಾರ್ಕಳ, ಕುಂದಾಪುರ, ಡಿಎಆರ್, ಮಹಿಳಾ ಪೊಲೀಸ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

Similar News