×
Ad

ಜೋಡಿ ಕೊಲೆ ಪ್ರಕರಣ: ಛೋಟಾ ರಾಜನ್‌ ನನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ

Update: 2022-11-17 20:53 IST

ಮುಂಬೈ: 2010ರಲ್ಲಿ ಭಿಂಡಿ ಬಜಾರ್‌ನ ಜೆಜೆ ಸಿಗ್ನಲ್ ಬಳಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಸೇರಿದಂತೆ 4 ಆರೋಪಿಗಳನ್ನು ಬಾಂಬೆ ಸೆಷನ್ಸ್ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ. 2010 ರಲ್ಲಿ, ಛೋಟಾ ಶಕೀಲ್ ಗ್ಯಾಂಗ್‌ನ ಆಸಿಫ್ ದಾಧಿ ಅಲಿಯಾಸ್ ಛೋಟೆ ಮಿಯಾನ್ ಮತ್ತು ಶಕೀಲ್ ಮೋದಕ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಜೋಡಿ ಕೊಲೆಯಲ್ಲಿ ಛೋಟಾ ರಾಜನ್ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

ಮಹಮ್ಮದ್ ಅಲಿ ಜಾನ್, ಪ್ರಣಯ್ ರಾಣೆ ಮತ್ತು ಉಮ್ಮದ್ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಆದರೆ ಈ ಅಪರಾಧವನ್ನು ಸಾಬೀತುಪಡಿಸುವಲ್ಲಿ ಸರ್ಕಾರಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ. ತನಿಖೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆ, ಗುರುತಿನ ಪರೇಡ್‌ನಲ್ಲಿ ವಿಫಲತೆ, ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳು ಹೊಂದಾಣಿಕೆಯಾಗದ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಎಲ್ಲಾ ಆರೋಪಿಗಳು 12 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಬಾಂಬೆ ಸೆಷನ್ಸ್ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಎಂ ಪಾಟೀಲ್ ಇಂದು ಈ ನಿರ್ಧಾರವನ್ನು ನೀಡಿದ್ದಾರೆ.

“ಜೆಜೆ ಮಾರ್ಗ್ ಪೊಲೀಸ್ ಠಾಣೆ ಬಳಿ ಗುಂಡಿನ ದಾಳಿ ನಡೆದಿದೆ. 4 ಮಂದಿ ಈ ಕೊಲೆ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಆಸಿಫ್ ಖಾನ್ ಹೊರತುಪಡಿಸಿ ಇನ್ನೂ ಮೂವರು ಗಾಯಗೊಂಡಿದ್ದಾರೆ. ಆದರೆ, ಆಸಿಫ್ ಖಾನ್ ಹೇಗೋ ಪ್ರಾಣ ಉಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಖಾನ್ ಅವರನ್ನು ಭೇಟಿಯಾಗಲು ಹೋದ ಶಕೀಲ್ ಮೋದಕ್ ಮತ್ತು ಆಸಿಫ್ ಖುರೇಷಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಕೀಲ್ ಮೋದಕ್ ಅವರು ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿದ್ದರು ಮತ್ತು ಖುರೇಷಿ ಮೋದಕ್ ಅವರ ಸ್ನೇಹಿತರಾಗಿದ್ದರು” ಎಂದು ಪ್ರಾಸಿಕ್ಯೂಷನ್ ಹೇಳಿತ್ತು.

Similar News