ಶಿವಾಜಿಯಿಂದ ಅಫ್ಝಲ್ ಖಾನ್ ಹತ್ಯೆಯ ಸ್ಮಾರಕ ಪ್ರತಾಪಗಢದಲ್ಲಿ ಸ್ಥಾಪನೆಗೆ ಮಹಾರಾಷ್ಟ್ರ ಸರಕಾರ ನಿರ್ಧಾರ
ಹೊಸದಿಲ್ಲಿ,ನ.17: ಮರಾಠ ಸಾಮ್ರಾಜ್ಯದ ದೊರೆ ಶಿವಾಜಿಯು ಆದಿಲ್ ಶಾಹಿ ಸಂಸ್ಥಾನದ ಸೇನಾ ದಂಡನಾಯಕ ಆಫ್ಸಲ್ ಖಾನ್ ನನ್ನು ಹತ್ಯೆಗೈಯುವುದನ್ನು ಬಿಂಬಿಸುವ ಪ್ರತಿಮೆಯೊಂದನ್ನು ತಾನು ಸ್ಥಾಪಿಸುವುದಾಗಿ ಮಹಾರಾಷ್ಟ್ರ ಸರಕಾರವು ಗುರುವಾರ ಘೋಷಿಸಿದೆ. ಮರಾಠ ದೊರೆ ಶಿವಾಜಿಯು ಆಫ್ಸಲ್ ಖಾನ್ ನನ್ನು 1659ರಲ್ಲಿ ಪ್ರತಾಪಘಡ ಕೋಟೆಯ ಸಮೀಪ ಹತ್ಯೆಗೈದಿದ್ದನು.
ಈ ಪ್ರತಿಮೆಯನ್ನು ಪ್ರತಾಪಗಢ ಕೋಟೆಯಲ್ಲಿರುವ ಆಫ್ಸಲ್ ಖಾನ್ ನ ಸಮಾಧಿಯ ಸಮೀಪವೇ ಸ್ಥಾಪಿಸಲಾಗುವುದು ಹಾಗೂ ಅದಕ್ಕೆ ಶಿವ ಪ್ರತಾಪ್ ಸ್ಮಾರಕ ಎಂದು ನಾಮಕರಣ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಆಫ್ಸಲ್ ಖಾನ್ ಸಮಾಧಿಯ ಅಸುಪಾಸಿನಲ್ಲಿ ಹಲವಾರು ಅನಧಿಕೃತ ರಚನೆಗಳನ್ನು ಸತಾರಾ ಜಿಲ್ಲಾಡಳಿತವು ನೆಲಸಮಗೊಳಿಸಿದ ಸುಮಾರು ಒಂದು ವಾರದ ಬಳಿಕ ಮಹಾರಾಷ್ಚ್ರ ಸರಕಾರವು ‘ಶಿವಪ್ರತಾಪ್ ಸ್ಮಾರಕ’ ನಿರ್ಮಾಣದ ಘೋಷಣೆ ಮಾಡಿದೆ.
ಆದರೆ ಸ್ಮಾರಕವು ಸಮೀಪದ ಅರಣ್ಯ ಭೂಮಿಯನ್ನು ಅತಿಕ್ರಮಿಸುವುದಿಲ್ಲವೆಂಬುದನ್ನು ಸರಕಾರವು ಖಾತರಿಪಡಿಸಿಕೊಳ್ಳಲಿದೆಯೆಂದು ನವೆಂಬರ್ 15ರಂದು ಪ್ರವಾಸೋದ್ಯಮ ಸಚಿವ ಮಂಗಳ ಪ್ರಭಾತ್ ಲೋಧಾ ತಿಳಿಸಿದ್ದಾರೆ.
ಲೋಧಾ ಅವರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು , ಸ್ಮಾರಕ ನಿರ್ಮಾಣದ ಪ್ರಸ್ತಾವನೆಯ ಬಗ್ಗೆ ಸತಾರಾ ಜಿಲ್ಲಾಧಿಕಾರಿ ಜೊತೆ ಚರ್ಚಿಸು ವಂತೆಯೂ ಸೂಚಿಸಿದ್ದರು. 2022ನೇ ಇಸವಿಯು ಶಿವಾಜಿಯ ಪಟ್ಟಾಭಿಷೇಕದ 350ನೇ ವರ್ಷವಾಗಿರುವುದಾಗಿಯೂ ಸಚಿವರು ಪತ್ರದಲ್ಲ್ಲಿ ಗಮನ ಸೆಳೆದಿದ್ದರು.