ಕಪ್ಪುಹಣ ಬಿಳುಪು ಪ್ರಕರಣ: ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು ನಿರಾಕರಣೆ
ಹೊಸದಿಲ್ಲಿ,ನ.17: ಕಪ್ಪುಹಣ ಬಿಳುಪು ಪ್ರಕರಣ ಆರೋಪಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದರ್ ಜೈನ್ ಅವರಿಗೆ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯವು ಗುರುವಾರ ನಿರಾಕರಿಸಿದೆ.
ಜಾಮೀನು ಬಿಡುಗಡೆ ಕೋರಿ ಜೈನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಕಾಸ್ ಧುಲ್ ಅವರು ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ವೈಭವ್ ಜೈನ್ ಹಾಗೂ ಅಂಕುಶ್ ಜೈನ್ ಅವರಿಗೂ ಅನುಮತಿ ನಿರಾಕರಿಸಿದ್ದಾರೆ.
ಸತ್ಯೇಂದ್ರ ಜೈನ್ ಪರ ವಕೀಲರು ವಾದ ಮಂಡಿಲುತ್ತಾ, ಕಕ್ಷಿದಾರನಿಗೆ ಜಾಮೀನು ನೀಡದೆ ಇರಲು ಸಾಧ್ಯವಿಲ್ಲದಂತಹ ಯಾವುದೇ ಕಾರಣಗಳಿಲ್ಲವೆಂದು ಪ್ರತಿಪಾದಿಸಿದರು. ಆದರೆ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯವು ಪ್ರಬಲ ವಿರೋಧ ವ್ಯಕ್ತಪಡಿಸಿತು. ಸತ್ಯೇಂದ್ರ ಜೈನ್ ಪ್ರಭಾವಿ ರಾಜಕಾರಣಿಯಾಗಿದ್ದು, ಜಾಮೀನು ನೀಡಿದಲ್ಲಿ ಅವರು ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಾಶಪಡಿಸುವ ಸಾಧ್ಯತೆ ಇದೆಯೆಂದು ನ್ಯಾಯಾಲಯಕ್ಕೆ ತಿಳಿಸಿತ್ತು..
ಕೇಜ್ರಿವಾಲ್ ಸಂಪುಟದಲ್ಲಿ ಖಾತೆ ರಹಿತ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರನ್ನ ಕಪ್ಪುಹಣ ಬಿಳುಪುಗೊಳಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ನವೆಂಬರ್ 30ರಂದು ಬಂಧಿಸಿತ್ತು. 2017ರಲ್ಲಿ ಸಿಬಿಐ ಜೈನ್ ವಿರುದ್ಧ ಕಪ್ಪು ಹಣ ಬಿಳುಪು ಕಾಯ್ದೆಯಡಿ ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಿತ್ತು. ತನಗೆ ನಂಟು ಇರುವ ನಾಲ್ಕು ಕಂಪೆನಿಗಳ ಮೂಲಕ ಜೈನ್ ಕಪ್ಪು ಹಣವನ್ನು ಬಿಳುಪುಗೊಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.