ನನಗೆ ಸಾವರ್ಕರ್‌ ಬಗ್ಗೆ ಗೌರವವಿದೆ, ರಾಹುಲ್‌ ಗಾಂಧಿ ಮಾತನ್ನು ನಾನು ಬೆಂಬಲಿಸುವುದಿಲ್ಲ: ಉದ್ಧವ್‌ ಠಾಕ್ರೆ

"ದೇಶದ ಸ್ವಾತಂತ್ರ್ಯಕ್ಕಾಗಿ ರಾಹುಲ್‌ ನಡೆಸುತ್ತಿರುವ ಯಾತ್ರೆಗೆ ನಮ್ಮ ಬೆಂಬಲವಿದೆ"

Update: 2022-11-18 06:22 GMT

ಹೊಸದಿಲ್ಲಿ: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ರನ್ನು ಟೀಕಿಸಿದ ಎರಡು ದಿನಗಳ ನಂತರ, ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಅವರು ಸಾವರ್ಕರ್ ರನ್ನು ಗೌರವಿಸುವುದರಿಂದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇದರೊಂದಿಗೆ, ಸದ್ಯ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ರಾಹುಲ್‌ ಗಾಂಧಿ ನಡೆಸುತ್ತಿರುವ ಯಾತ್ರೆಯನ್ನು ಶಿವಸೇನೆ ಬೆಂಬಲಿಸುತ್ತದೆ ಎಂದು ಠಾಕ್ರೆ ಹೇಳಿದರು. ಯಾತ್ರೆಯ ಅಂಗವಾಗಿ ಕಾಂಗ್ರೆಸ್ ಆಯೋಜಿಸಿರುವ ಶೆಗಾಂವ್‌ನಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತನಗೆ ಸಾಧ್ಯವಾಗುವುದಿಲ್ಲ ಎಂದೂ ಅವರು ಸೂಚಿಸಿದ್ದಾರೆ. ಠಾಕ್ರೆ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಕಾಂಗ್ರೆಸ್ ಆಹ್ವಾನಿಸಿತ್ತು.

ಇದೇ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಆರ್‌ಎಸ್‌ಎಸ್ ಭಾರತದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿಲ್ಲ ಎಂದ ಅವರು, ಅವರ ಬಗ್ಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತುಂಬಾ ಮಾತನಾಡುವ ಬಿಜೆಪಿ ಸಾವರ್ಕರ್‌ಗೆ ಭಾರತ ರತ್ನ ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದನ್ನು ನಾವು ಒಪ್ಪುವುದಿಲ್ಲ. ನಾವು ಸಾವರ್ಕರ್ ಅವರನ್ನು ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ. ಆದರೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾವರ್ಕರ್ ಬಗ್ಗೆ ನಮ್ಮನ್ನು ಪ್ರಶ್ನಿಸುವ ಮೊದಲು, ನೀವು (ಬಿಜೆಪಿ) ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರ ಮತ್ತು ಕೊಡುಗೆ ಏನು ಎಂಬುದನ್ನು ಮೊದಲು ನಮಗೆ ತಿಳಿಸಬೇಕು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾವು ಇರಲಿಲ್ಲ, ಆದರೆ ಆರ್‌ಎಸ್‌ಎಸ್ ಇತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆಗೆ ಯಾವುದೇ ಪಾತ್ರವಿಲ್ಲ ಎಂದು ಠಾಕ್ರೆ ಹೇಳಿದರು. ಬಿಜೆಪಿಗೆ ಸಾವರ್ಕರ್ ಬಗ್ಗೆ ಮಾತನಾಡುವ ಹಕ್ಕಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯೊಂದಿಗೆ ಸರ್ಕಾರ ರಚಿಸಲು ಕೈಜೋಡಿಸಿದೆ ಎಂದು ನೆನಪಿಸಿದರು.

Similar News