×
Ad

ಭಾರತದ ಮೊದಲ ಖಾಸಗಿ ರಾಕೆಟ್‌ ವಿಕ್ರಮ್-ಎಸ್‌ ಯಶಸ್ವಿ ಉಡಾವಣೆ

Update: 2022-11-18 12:39 IST

ಹೊಸದಿಲ್ಲಿ: ವಿಕ್ರಮ್-ಎಸ್, ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್, ಇಂದು ಚೆನ್ನೈನಿಂದ ಸುಮಾರು 115 ಕಿಮೀ ದೂರದಲ್ಲಿರುವ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. ದಶಕಗಳಿಂದ ಸರ್ಕಾರಿ-ಇಸ್ರೋ ಪ್ರಾಬಲ್ಯ ಹೊಂದಿರುವ ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲಯ ಸದ್ಯ ಸಹಭಾಗಿಯಾಗಿರುವುದು ಐತಿಹಾಸಿಕವಾಗಿದೆ.

"ಮಿಷನ್ ಪ್ರಾರಂಭ್ ಯಶಸ್ವಿಯಾಗಿ ನೆರವೇರಿದೆ. ಅಭಿನಂದನೆಗಳು" ಎಂದು ಇಸ್ರೋ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

ಐತಿಹಾಸಿಕ ಉಡಾವಣೆಯನ್ನು ವೀಕ್ಷಿಸಲು ಶ್ರೀಹರಿಕೋಟಾಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ರಾಕೆಟ್ ಉಡಾವಣೆಯು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಮಹತ್ವದ ತಿರುವು ಎಂದು ಹೇಳಿದರು.

ಇಸ್ರೋ ಮತ್ತು ಇನ್-ಸ್ಪೇಸ್ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ಬೆಂಬಲದೊಂದಿಗೆ 'ಪ್ರಾರಂಭ' ಮಿಷನ್ ಮತ್ತು ವಿಕ್ರಮ್-ಎಸ್ ರಾಕೆಟ್ ಅನ್ನು ಹೈದರಾಬಾದ್ ಮೂಲದ ಸ್ಟಾರ್ಟ್-ಅಪ್ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದೆ. 

ಆಂಧ್ರಪ್ರದೇಶ ಮೂಲದ ಎನ್ ಸ್ಪೇಸ್ ಟೆಕ್ ಇಂಡಿಯಾ, ಚೆನ್ನೈ ಮೂಲದ ಸ್ಟಾರ್ಟಪ್ ಸ್ಪೇಸ್ ಕಿಡ್ಸ್ ಮತ್ತು ಅರ್ಮೇನಿಯನ್ ಬಾಜೂಮ್ ಕ್ಯೂ ಸ್ಪೇಸ್ ರಿಸರ್ಚ್ ಲ್ಯಾಬ್ ನಿರ್ಮಿಸಿದ ಮೂರು ಪೇಲೋಡ್ ಗಳನ್ನು ರಾಕೆಟ್ ಹೊತ್ತೊಯ್ದಿದೆ.

"ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡುವ ಮೂಲಕ ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ. ಇದು ನವ ಭಾರತದ ಸಂಕೇತವಾಗಿದೆ ಮತ್ತು ಉತ್ತಮ ಭವಿಷ್ಯದ ಪ್ರಾರಂಭವಾಗಿದೆ." ಎಂದು‌ ಸ್ಕೈರೂಟ್ ಏರೋಸ್ಪೇಸ್ ಸಹ ಸಂಸ್ಥಾಪಕ ಪವನ್ ಕುಮಾರ್ ಚಂದನ್ ಹೇಳಿದರು.

Similar News