ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಟೀಕೆ: ಪುಣೆಯ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು‌

Update: 2022-11-18 14:50 GMT

ಪುಣೆ, ನ.18: ವಿ.ಡಿ. ಸಾವರ್ಕರ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕೆಯನ್ನು ಪ್ರತಿಭಟಿಸಿ ಇಲ್ಲಿಯ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ರಾಹುಲ್ ಚಿತ್ರಕ್ಕೆ ಮಸಿ ಬಳಿಯಲು ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

ರಾಹುಲ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ‘ಮಾಫಿ‌ ವೀರ ಜವಾಹರಲಾಲ್ ನೆಹರು’ ಎಂಬ ಸಂದೇಶವುಳ್ಳ ಪೋಸ್ಟರ್‌ಗಳನ್ನು ಕಾಂಗ್ರೆಸ್ ಭವನದ ಗೋಡೆಗಳಿಗೆ ಅಂಟಿಸಿದ್ದರು. 10ರಿಂದ 15 ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರೇ ಸಾವರ್ಕರ್ ಅವರಿಗೆ ಸನ್ಮಾನ ಪತ್ರವನ್ನು ನೀಡಿದ್ದರು, ಹೀಗಾಗಿ ರಾಹುಲ್‌ಗೆ ಕಾಂಗ್ರೆಸ್‌ನ ಇತಿಹಾಸ ತಿಳಿದಿರುವ ಬಗ್ಗೆ ನಮಗೆ ಶಂಕೆಯಿದೆ ’ ಎಂದು ಬಿಜೆಪಿ ಯುವಮೋರ್ಚಾದ ಸದಸ್ಯನೋರ್ವ ಸುದ್ದಿಗಾರರಿಗೆ ತಿಳಿಸಿದ.

ಗುರುವಾರ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭ ಸಾವರ್ಕರ್‌ರನ್ನು ಟೀಕಿಸಿದ್ದ ರಾಹುಲ್,ಅವರು ಬ್ರಿಟಿಷ್ ಆಡಳಿತಕ್ಕೆ 
ನೆರವಾಗಿದ್ದರು ಮತ್ತು ಭೀತಿಯಿಂದ ಬ್ರಿಟಿಷ್‌ರಿಗೆ ದಯಾಭಿಕ್ಷೆ ಅರ್ಜಿಯನ್ನು ಸಲ್ಲಿಸಿದ್ದರು ಎಂದು ಆರೋಪಿಸಿದ್ದರು. ಇದಕ್ಕೂ ಮುನ್ನ, ಸಾವರ್ಕರ್ ಬಿಜೆಪಿ ಮತ್ತು 
ಆರೆಸ್ಸೆಸ್‌ನ ಸಂಕೇತವಾಗಿದ್ದಾರೆ ಎಂದೂ ರಾಹುಲ್ ಟೀಕಿಸಿದ್ದರು. ಅವರ ಟೀಕೆಗಳು ಪ್ರತಿಭಟನೆಗಳಿಗೆ ನಾಂದಿ ಹಾಡಿದ್ದವು.

ಈ ನಡುವೆ ಇಲ್ಲಿಯ ಸ್ವಾರ್‌ಗೇಟ್‌ನಲ್ಲಿರುವ ಸಾವರ್ಕರ್ ಸ್ಮಾರಕದಲ್ಲಿಯ ಫಲಕದಲ್ಲಿ ‘ಮಾಫಿವೀರ ’ಎಂದು ಬರೆದಿದ್ದಕ್ಕಾಗಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ 
ಪುಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸಾವರ್ಕರ್ ಸ್ಮಾರಕವನ್ನು ಹಾಲಿನಿಂದ ಶುದ್ಧಗೊಳಿಸುವುದಾಗಿ ಪುಣೆ ಬಿಜೆಪಿ ಘಟಕವು ತಿಳಿಸಿದೆ.

Similar News